Tuesday, November 24, 2009

ನಿಜವಾದ ಪ್ರೀತಿ ಅಂದರೆ ಇದೇನಾ?



ಅನಿಸುತಿದೆ ಏಕಿಂದು ಮನಸೆಲ್ಲಾ ಖಾಲಿ ಖಾಲಿ ಎಂದು? ಅರಳಿದ ಹೂನಂತಿದ್ದುದು ಇಂದು
ಬಾಡಿದೆ ಎಂದು! ಬರಡು ಭೂಮಿಯಲ್ಲಿ ನೀರಿಲ್ಲದೆ ಬಿದ್ದಿರುವ ಜೀವದಂತೆ ನಾ
ಕಾಯುತ್ತಿದ್ದೇನೆ ನೀ ಬರುವ ಹಾದಿಯಲ್ಲೇ.. ಆದರಿಂದು ಅನಿಸುತಿದೆ ಮನಸೆಲ್ಲ ಖಾಲಿ ಖಾಲಿ
ಎಂದು..!

ಅದೊಂದು ಗಳಿಗೆ ನಾ ನಿತ್ಯ ನಿನ್ನ ನೋಡುತ್ತಿದ್ದೆ .ನಿನ್ನ ಮುಂದೆ ನಿಂತು ನೋಡಲೂ
ಹೆದರುತ್ತಿತ್ತು ನನ್ನೀ ಮನಸ್ಸು . ನೀ ಎಂದು ನೋಡುವೆ ಎಂದು ಚಡಪಡಿಸುತ್ತಿತ್ತು ಈ
ಮುದ್ದು ಮನಸ್ಸು. ದಿನಾಗಲೂ ಎದುರು ಬಂದರೂ ನೀ ನನಗೆ ನೀಡುತ್ತಿದ್ದ ಆ ಮುದ್ದಾದ
ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ಆ ದಿನಗಳಲ್ಲಿ ನಮ್ಮಿಬರಲ್ಲಿ ಇರಿಸು
ಮುರಿಸು ಬಂದದ್ದೇ ಈ ಪ್ರೀತಿ ಬೆಳೆಯಲು ಕಾರಣವಾಯಿತು. ದಿನಗಳೆದಂತೆ ನೀ ನನ್ನವನಾದೆ.
ನಾ ನಿನ್ನ ಮನದ ಒಡತಿಯಾಗಲೇ ಎಂದಾಗ ನೀನಿತ್ತ ಉತ್ತರ ನನಗೀಗಲೂ ನೆನಪಿದೆ..

ಸತ್ಯ ನಿಷ್ಠೆಯ ನಿನ್ನೀ ಬಾಳು ನಿಜವಾಗಲೂ ಸಾರ್ಥಕ. ನಿನಗಿದ್ದ ಜವಾಬ್ದಾರಿಗಳೋ ಇಂದು
ನಮ್ಮಿಬ್ಬರನ್ನೂ ದೂರಕೆ ಸರಿಸುತಲಿದೆ.

ನೀ ನನ್ನ ಮೇಲಿಟ್ಟ ಪ್ರೀತಿ, ಅಭಿಮಾನ, ಗೌರವ ಗಂಗೆಯಷ್ಟೇ ಪವಿತ್ರವಾದುದು. ಎಷ್ಟೋ
ಬಾರಿ ನಿನ್ನ ನಗು ನೋಡುತ್ತಲೇ ನಾ ಮೈಮರೆಯುತ್ತಿದ್ದೆ. ನಿನ್ನ ತೋಳ ತೆಕ್ಕೆಗಳಲ್ಲಿ ನಾ
ಗುಬ್ಬಿಮರಿಯಂತೆ ಅವಿತುಕೊಂಡು ಇಡೀ ಪ್ರಪಂಚದ ಸುಖವನ್ನೆಲ್ಲಾ ಆ ಆಲಿಂಗನದಲ್ಲಿ ನಾ
ಕಂಡೆ. ಈಗಲೂ ನೆನಪಿದೆ ಆ ನಿನ್ನ ಕಣ್ಣುಗಳು ನನ್ನ ಹೇಗೆ ಕೆಣಕುತ್ತಿತ್ತು ಎಂದು..ಅದು
ಈಗಲೂ ಕೆಣಕುತ್ತಿದೆ ನನ್ನನು…..

ತಂಗಾಳಿಯಂತೆ ನಿನ್ನ ಪ್ರೇಮ. ಒಮ್ಮೆಗೇ ಹಾರಿ ಬಂದು ನನ್ನ ಮಡಿಲಲ್ಲಿ ಸೇರುತ್ತಿದ್ದ
ನಿನ್ನ ಮೊಗ ನಿಜವಾಗಲೂ ಆ ಪೂರ್ಣ ಚಂದಿರನಂತೆ ಹೊಳೆಯುತ್ತಿತ್ತು. ರೋಮಾಂಚನ
ಮಾಡುತ್ತಿತ್ತು. ನಿನ್ನ ನಡೆ -ನುಡಿ ಮುತ್ತಿನಂತದ್ದು. ನಿನ್ನ ಹೃದಯ ಅಮೃತಧಾರೆ.ಆ
ದೇವರು ನಿನಗೆ ಕಷ್ಟ ನೀಡಿ ನಿನ್ನ ಮೊಗದಲ್ಲೆಲ್ಲೋ ಮೂಲೆಯಲ್ಲಿ ದುಃಖದ ಛಾಯೆಯ
ಅಡಗಿಸಿದ್ದರು, ಅದನ್ನು ನಾ ಕಂಡೂ ಏನೂ ಮಾಡಲಾಗದೆ ಮೌನಿಯಾದೆ. ಇದೆ ನನ್ನ ಸದಾ
ಹಿಂಸಿಸಿದ್ದು ಸಹಾ…

ನನ್ನ ಮಡಿಲಿಗೆ ತುಂಬಿ ಒಂದು ಹನಿ ಕಣ್ಣೀರು ಸಹ ನನ್ನ ಗಲ್ಲದ ಮೇಲೆ ಬೀಳದಂತೆ
ನೋಡಿಕೊಂಡು, ಸಾಗರದಂತಹ ನಿನ್ನ ಪ್ರೀತಿಯ ನನ್ನ ಮೇಲೆ ಹರಿಸಿ, ಧೈರ್ಯ,
ಆತ್ಮವಿಶ್ವಾಸಗಳನ್ನು ನನ್ನ ಎದೆಗೆ ಅಪ್ಪಳಿಸುವಂತೆ ಮಾಡಿ, ಜೀವನದ ಏರಿಳಿತಗಳ ಬಗ್ಗೆ
ಅರಿಯುವಂತೆ ಹೇಳಿ, ನಿನ್ನ ಮುಗ್ಧತೆಯ ಒಲವಲ್ಲಿ
ನನ್ನ ಕರಗುವಂತೆ ಮಾಡಿದ ನನ್ನ ಸರ್ವಸ್ವವೂ ನೀನೆ ನೀನೇನೆ….!!!

ನಮ್ಮಿಬ್ಬರ ಒಲವು ಸಂಗಮವಾಗಿ ಅದು ಭೋರ್ಗರೆಯಲ್ಲೂ ತೊಡಗಿತು. ಬರೀ ನೀ ನನ್ನ ಒಳವಾಗದೆ
ಬಾಳ ಸಖನಾದೆ,ಧೈರ್ಯ ತುಂಬುವ ಗೆಳೆಯನಾದೆ, ಸರಿ ದಾರೀಲಿ ನಡೆಸುವ ತಂದೆಯಾದೆ.
ಆಕಾಶದೆತ್ತರದ ನಿನ್ನ ಅಮೂಲ್ಯವಾದ ಅನನ್ಯವಾದ ಪ್ರೀತಿ ನೀಡಿ ನನ್ನ ಅರ್ದಾಂಗಿಯಾದೆ…

ಆದರೇನು ಮಾಡುವುದು ಎಲ್ಲ ವಿಧಿಬರಹ..ಅನ್ದಾಗಿತ್ತು ನಮ್ಮ ಮನಸ್ಸು-ಹೃದಯಗಳ ಮದುವೆ ಈ
ಹೃದಯದಂಗಳದಲಿ, ಆದರೆ ಇದನ್ನು ಸಮಾಜ ಒಪ್ಪಿತೇ? ಹಾಗಾಗಿ ಇಂದು ನಾ ನಿನಗಾಗಿಯೇ
ಕಾಯುತಿರುವೆನು, ಆ ಮರಗಿಡಗಳ ನಡುವೆ ಹೂವನಿಡಿದು, ಪ್ರೀತಿಯ ಹೂಗೊಂಚಲ ಹೊತ್ತು,
ಆದರೇನು ಮಾಡುವುದು ಇಂದು ನಿನ್ನ ಮದುವೆ!ನನ್ನೊಡನೆ ಅಲ್ಲ …ಬೇರೆಯ ಹೆಣ್ಣಿನೊಂದಿಗೆ !
ನೋಯುತ್ತಿದೆ ಮನಸ್ಸು ಕಾಯುತ್ತಿದೆ ಹೃದಯ ನೀ ಎಂದು ಮತ್ತೆ ಬಂದು ನನ್ನ ಹೃದಯದ ಬಾಗಿಲ
ತಟ್ಟುವೆ ಎಂದು ….?

ನೀ ಏನಾದರೂ ಆ ದಾರೀಲಿ ಮತ್ತೆ ಬಂದರೆ ಮರೆಯದೆ ನೋಡು ನಾನಲ್ಲಿ ನಿನಗಾಗಿ ಬಿಟ್ಟು
ಹೋಗಿರುತ್ತೇನೆ ನನ್ನ ಹೃದಯವನ್ನು. ಸಿಕ್ಕರೆ ಮರೆಯದೆ ಅದನ್ನು ಎತ್ತಿಕೊಂಡು ಹೋಗು,
ನನ್ನ ಹಾಲಿನಂತಹ ಪ್ರೀತಿಯ ತೊಯ್ದು ಎರಕವ ಹೊಯ್ದು ನೀನದನ್ನು ಸ್ವೀಕರಿಸು. ಈಗಲೂ ಒಂದು
ಕತ್ತಲೆ ಕೋಣೆಯಲ್ಲಿ ಬೆಳಕನ್ನು ಬಾರದಂತೆ ಮಾಡಿ ಅಳುತ ಕುಳಿತಿರುವೆ ಒಂದು
ಮೂಲೆಯಲ್ಲಿ…

-ನಿನಗಾಗಿ ಕಾದಿರುವ ????????????


1 comment:

  1. this one is superd i loved it.....especially last line....

    ReplyDelete