Sunday, September 20, 2009

ಸ್ವಪ್ನದಲ್ಲಿ ಬಂದು ಮರವೊಂದು ಮಾತನಾಡಿದಾಗ!


ಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.
* ರೂಪಾ ಎಸ್

ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ ದೇವತೆಗಳು ವಾಸಿಸುತ್ತಾರೆ ಎನ್ನುವ ದಟ್ಟವಾದ ನಂಬಿಕೆ ಜನರಲ್ಲಿ ಬೇರೂರಿದೆ. ಆದ್ದರಿಂದಲೇ ಅವುಗಳನ್ನು ಕಡಿಯುತ್ತಿರಲಿಲ್ಲ. ಅರಳಿ ಮತ್ತು ಬೇವಿನ ಸಂಗಮದ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಮಾಡಿದರೆ ಅನೇಕ ಇಷ್ಟಾರ್ಥಗಳ ಸಿದ್ದಿಸುತ್ತವೆ ಎಂಬುದು ಆಸ್ತಿಕರ ನಂಬುಗೆ. ತೆಂಗಿನ ಮರವಂತೂ ಕಲ್ಪವೃಕ್ಷವೆಂದೇ ಭಕ್ತರ ಮನದಲ್ಲಿ ಸ್ಥಾಯಿಯಾಗಿದೆ.
ಈ ಎಲ್ಲಾ ನಂಬಿಕೆಗಳೂ ವೃಕ್ಷಸಂಪತ್ತನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಜಡವಸ್ತುಗಳಲ್ಲೂ ವಿಶ್ವಾಸದ ಉಪಸ್ಥಿತಿಯನ್ನು ಕಂಡ ನಮ್ಮ ಸಂಸ್ಕ್ರತಿಯಲ್ಲಿ ಮರಗಳು ಪೂಜಾರ್ಹವಾದುದಲ್ಲಿ ಆಶ್ಚರ್ಯವೇನಿಲ್ಲ. ಇಂದ್ರೀಯ ಗೋಚರವಾದ ಪ್ರಪಂಚದಲ್ಲಿ ಇಂದ್ರೀಯಾತೀತ ಚೇತನದ ಅಸ್ತಿತ್ವವನ್ನು ಕಂಡವರು ಭಾರತೀಯರೇ. ಆದುದರಿಂದಲೇ ಪ್ರಕೃತಿಯಡನೆಯೂ ಇತರ ಜೀವಿಗಳೊಡನೆಯೂ ಸಾಮರಸ್ಯದಿಂದ ನಮಗೆ ಬಾಳಲು ಸಾದ್ಯವಾಯಿತು.
ಈ ಮೇಲಿನ ಸಿದ್ದಾಂತಗಳ ಹಿನ್ನೆಲೆಯಲ್ಲಿ ನಮ್ಮ ಹಳ್ಳಿಯಲ್ಲಿ ಹಿಂದೆ ಸಂಭವಿಸಿದ ಒಂದು ಅಲೌಕಿಕವೆನ್ನಿಸಬಹುದಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಈ ಘಟನೆ ಭಾವಜೀವಿಯಾದ ಮನುಷ್ಯನಿಗೂ ಮರಕ್ಕೂ ಇರುವ ಭಾವನಾತ್ಮಕ ಸಂಬಂಧವನ್ನು ಸಾಕ್ಷೀಕರಿಸಿದೆ.
Can a tree speak with a man? Why not!
ನಮ್ಮೂರಾದ ಮೈಸೂರು ಗ್ರಾಮದಲ್ಲಿ ನಮ್ಮ ತೋಟದಲ್ಲಿ ಬೆಳಗಿ ಮರವೆಂಬ ಮಾವಿನ ಮರವೊಂದಿತ್ತು. ಅದಕ್ಕೆ ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿತ್ತು ಎಂದು ಎಲ್ಲರೂ ಹೇಳುತ್ತಿದ್ದರು. ಆ ಮರದ ಬುಡವೇ ಐದಾರು ಜನ ನಿಂತು ಕೈಗಳನ್ನು ಚಾಚಿದರೂ ಹಿಡಿಯಲಾರದಷ್ಟು ದೊಡ್ಡದು. ಅದರ ಅನೇಕ ಬೃಹತ್ ಶಾಖೆಗಳು ಹಿಂದೆಯೇ ಬಿದ್ದು ಹೋಗಿ ಒಂದೇ ಒಂದು ದೊಡ್ಡ ಶಾಖೆ ಮಾತ್ರ ಉಳಿದುಕೊಂಡಿತ್ತು. ಆಕಾಶವನ್ನು ಅಳೆಯಲು ಕೈಚಾಚಿದಂತಿದ್ದ ಆ ಕೊಂಬೆಯಲ್ಲೇ ಶಾಖೋಪಶಾಖೆಗಳಿದ್ದು ಅವುಗಳಲ್ಲಿ ಪ್ರತಿವರ್ಷವೂ ಹಣ್ಣುಗಳು ಬಿಡುತಿದ್ದವು. ಆ ಹಣ್ಣುಗಳು ಇತರ ಮಾವಿನ ಹಣ್ಣುಗಳಂತಿರದೆ ಬಿಳಿಯ ಬಣ್ಣದಾಗಿತ್ತು. ಅದರಿಂದಲೇ ಆ ಮರಕ್ಕೆ ಬೆಳಗಿ ಎಂಬ ಹೆಸರು ಬಂದಿತ್ತು.
ಆ ಮರದ ಒಂದು ವೈಚಿತ್ರ್ಯವೆಂದರೆ ಅದರ ಬುಡವನ್ನು ಕುಡುಗೋಲಿನಿಂದ ಗೀರಿದಾಗ ಒಳಗಿಂದ ಬೆಳ್ಳಗಿನ ಹಾಲು ಬರುತಿತ್ತು ಮತ್ತು ಹಾಗೆಯೇ ನೋವಿನ ಚೀತ್ಕಾರದಂತೆ ಕೇಳಿಸುವ ಒಂದು ದನಿ ಕೇಳಿಸುತಿತ್ತು. ಇದನ್ನು ಒಮ್ಮೆ ನನಗೆ ಕೇಳಿಸಿ ತೋರಿಸಿ ನಮ್ಮ ತಾತನವರು ಮರ ನೋವಿನಿಂದ ಚೀರುತ್ತದೆ ಅದಕ್ಕೆ ಕುಡುಗೋಲು ಕೊಡಲಿಗಳನ್ನು ತಗಲಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು.
ಆ ಮರದ ಬಗ್ಗೆ ಕಥೆಯೊಂದು ಪ್ರಚಲಿತವಿತ್ತು. ಮಾವಿನ ಹಣ್ಣಿನಋತುವಿನಲ್ಲಿ ಪ್ರತಿವರ್ಷವೂ ಮರದಿಂದ ಹಣ್ಣುಗಳು ಕೆಳಗೆ ಉದುರುತಿದ್ವು. ಅವುಗಳನ್ನು ತಿನ್ನಲು ಆನೆಯೊಂದು ಪಕ್ಕದ ಕಾಡಿನಿಂದ ಬಂದು ಹಣ್ಣುಗಳನ್ನು ತಿಂದು ಹೋಗುತ್ತಿತ್ತಂತೆ. ಆ ಆನೆ ಬೇರೆ ಮಾವಿನ ಮರಗಳ ಬಳಿಗೆ ಹೋಗುತ್ತಲೇ ಇರಲಿಲ್ಲವಂತೆ. ನಮ್ಮ ತಾತನವರಿಗೆ ಆ ಮರದ ಬಗ್ಗೆ ಒಂದು ರೀತಿಯ ವಿಶೇಷ ಗೌರವ, ವಿಶ್ವಾಸಗಳಿದ್ದವು. ಅವರು ನಿತ್ಯವೂ ಅದರ ಬಳಿ ಹೋಗಿ ನಿಂತು ನೋಡಿ ವೃದ್ದಾಪದಲ್ಲಿರುವ ಹಿರಿಯ ಬಂದುವೊಬ್ಬರನ್ನು ನೋಡಿ ಬರುವಂತೆ ನೋಡಿಕೊಂಡು ಬರುತಿದ್ದರು. ನನಗೆ ಇದೆಲ್ಲ ವಿಚಿತ್ರವಾಗಿ, ಅಲೌಕಿಕವಾಗಿ ತೋರುತಿತ್ತು.
ಮಳೆಗಾಲದ ಒಂದು ದಿನ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ನನ್ನನ್ನು ಇದ್ದಕ್ಕಿದ್ದಂತೆ ನನ್ನ ತಾತ ಬಂದು ಎಬ್ಬಿಸಿ 'ಬಾ ತೋಟಕ್ಕೆ ಹೋಗಿ ಬರಬೇಕು' ಎಂದರು. ಅವರ ಮುಖದಲ್ಲಿ ವಿಚಿತ್ರವಾದ ಭಾವನೆಗಳಿದ್ದವು, ಯಾವುದೋ ವಿಷಯವನ್ನು ಹೇಳಲು ಸಂಕೋಚಪಟ್ಟು ಕೊಂಡಂತೆ ತೋರಿತು, ನಾನು ಹಾಸಿಗೆ ಬಿಟ್ಟೆದ್ದು ಹಲ್ಲು ಉಜ್ಜಿಕೊಂಡು ಹಿಂದೆ ಹೊರಟೆ. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ನೆಲವು ನೆನೆದು ಹುಲ್ಲಿನ ಗರಿಕೆಗಳ ಮೇಲೆ ನೀರಿನ ಹನಿಗಳು ಮುತ್ತು ಮುತ್ತಾಗಿ ನಿಂತಿದ್ದವು. ಶೀತ ಗಾಳಿಯ ಚಳಿಯು ಮೈಯನ್ನು ನಡುಗಿಸುತಿತ್ತು. ನಾವು ಮಾವಿನ ಮರಗಳ ನಡುವೆ ಹೋದಾಗ ಗಾಳಿಯಿಂದ ಅಲುಗಾಡುವ ಎಲೆಗಳಿಂದ ಉದುರಿದ ನೀರಿನ ಹನಿಗಳು ಮೈನಡುಕವನ್ನು ಇನ್ನಷ್ಟು ಹೆಚ್ಚಿಸುತಿದ್ದವು. ಆದರೂ ಆ ಮಾವಿನ ಹೂ ಕಾಯಿಗಳ ಸುಗಂಧ, ಮಣ್ಣಿನ ವಾಸನೆ, ಇವೆಲ್ಲ ಸೇರಿ ವಾತಾವರಣವನ್ನು ಅಪ್ಯಾಯಮಾನವಾಗಿಸಿದ್ದವು.
ನಮ್ಮ ತಾತ ಬೆಳಗಿ ಮರದ ಬಳಿಗೆ ಹೋಗಿ ನಿಂತರು. ನಾನೂ ಅವರ ಪಕ್ಕದಲ್ಲಿ ನಿಂತೆ? ಅವರು ಬೆಳಗಿ ಮರವನ್ನು ಒಮ್ಮೆ ನೋಡಿ ಒಂದು ರೀತಿಯ ಸಂಕೋಚದ ಮುಖ ಮಾಡಿಕೊಂಡು ಹೇಳಿದರು. ಈ ಬೆಳಿಗ್ಗೆ ಒಂದು ವಿಚಿತ್ರವಾದ ಸ್ವಪ್ನವಾಯಿತು. ಅದರಲ್ಲಿ ಈ ಬೆಳಗಿ ಮರ ಬಂದು ನಾನು ಈ ಬೆಳಿಗ್ಗೆ ಬಿದ್ದು ಹೋಗುತ್ತೇನೆ ಎಂದು ಹೇಳಿದ ಹಾಗಾಯಿತು. ಇದು ಭ್ರಮೆಯಿರಬಹುದುದೇನೋ ಆದರೂ ಮನಸ್ಸು ತಡೆಯಲಿಲ್ಲ ಬಂದು ಬಿಟ್ಟೆ ಎಂದರು.
ಅವರ ಸ್ವಪ್ನದಲ್ಲಿ ಪ್ರಾಯಶಃ ಅವರಿಗೆ ಸಂಪೂರ್ಣವಾಗಿ ನಂಬಿಕೆ ಇರಲಿಲ್ಲವೆಂದು ನನಗೆ ತೋರಿತು. ಆದರೂ ಸ್ವಪ್ನವನ್ನು ಸಂಪೂರ್ಣ ತಳ್ಳಿಹಾಕದೆ ಅಲ್ಲಿಗೆ ಬಂದಿದ್ದರು. ತನ್ನ ನಂಬಿಕೆಗೆ ಪುಷ್ಟಿಬೇಕೆಂಬಂತೆ ನನ್ನನ್ನೂ ಕರೆದುಕೊಂಡು ಬಂದಿದ್ದರು. ಒಂದೆರಡು ನಿಮಿಷಗಳು ನಾವಿಬ್ಬರೂ ಮೌನವಾಗಿ ಮರದ ಮುಂದೆ ನಿಂತೆವು. ಆಗ ವಿಲಕ್ಷಣವಾದ ಘಟನೆ ನಡೆದು ಹೋಯಿತು. ಒಮ್ಮೆ ಗಾಳಿ ಜೋರಾಗಿ ಬೀಸಿತು. ಮರುಕ್ಷಣವೇ ನೋಡನೋಡುತ್ತಿದ್ದಂತೆ ಲಟಪಟನೆಂದು ಬೆಳಗಿ ಮರದಲ್ಲಿ ಉಳಿದಿದ್ದ ಅದರ ದೈತ್ಯಗಾತ್ರದ ಶಾಖೆ ಮುರಿದು ನಿಧಾನವಾಗಿ ನೆಲಕ್ಕೆ ಬಿದು ಒಮ್ಮೆ ಅದುರಿ ನಿಶ್ಯಬ್ದವಾಗಿ ಹೋಯಿತು.
ನಾನು ಅವಕ್ಕಾಗಿ ನಿಂತು ಹೋದೆ ನನ್ನ ತಾತ ಒಂದು ಕ್ಷಣ ಮರದ ಬಳಿಗೆ ಸರಸರನೆ ಹೋಗಿ ಬಿದಿದ್ದ ಕೊಂಬೆಯನ್ನು ಕೈಯಿಂದ ಸವರಿದರು. ಅವರ ಕಣ್ಣಿನಿಂದ ಉದುರಿದ ಹನಿಗಳು ಬಿದ್ದು ಹೋದ ಕೊಂಬೆಗೆ ಬಾಷ್ಪಾಭಿಷೇಕ ಮಾಡಿದವು. ಆ ಸ್ವಪ್ನದ ಅರ್ಥ ಏನು? ಸ್ವಪ್ನದಲ್ಲಿ ಮರವು ಬಂದು ಹೇಳೀದಂತೆಯೇ ಪ್ರತ್ಯಕ್ಷ್ಯ ನಡೆದು ಹೋಯಿತಲ್ಲಾ? ಮರದ ಆತ್ಮವೇ ಮನುಷ್ಯನ ಮನಸ್ಸಿನೊಡನೆ ಸಂಪರ್ಕಗೊಂಡು ಈ ಅಲೌಕಿಕ ಘಟನೆ ಜರುಗಿತೋ? ಅಥವಾ ಸ್ವಪ್ನದಲ್ಲಿ ಹೇಳಿದಂತೆಯೇ ಜರುಗಿದ್ದು ಕೇವಲ ಕಾಕತಾಳೀಯವೋ? ವ್ಯಾಖ್ಯಾನಿಸುವುದು ಕಷ್ಟ. ಅದೇನೇ ಇದ್ದರೂ ಮನುಷ್ಯನಿಗೆ ಆತನ ಕಣ್ಮುಂದೇಯೇ ಇರುವ, ಚಿಕ್ಕಂದಿನಿಂದ ನೋಡಿದ, ಪ್ರೀತಿಸಿದ, ದೈವಸ್ವರೂಪಿಯೆಂದು ಬಗೆದ ಮರದೊಡನೆ ಭಾವಾತ್ಮಕ ಸಂಬಂಧವಿರಿವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಈ ಘಟನೆಯ ಬಗ್ಗೆ ಮನಶಾಸ್ತ್ರದಲ್ಲಿ ಅಥವಾ ವೈಜ್ಞಾನಿಕವಾಗಿ ವಿವರಣೆ ಏನೇ ಇರಲಿ, ಈ ಘಟನೆಯನ್ನು ನೆನೆಸಿದಾಗ ನನ್ನ ಮೈ ಇಂದೂ ರೋಮಾಂಚನಗೊಳ್ಳುತ್ತದೆ. ಸ್ವಪ್ನದಲ್ಲಿ ಬಂದಂತೆಯೇ ಎದುರಿಗೆ ನಡೆದುಬಿಟ್ಟಿದ್ದರಿಂದ ಮುಂದಾಗುವುದನ್ನು ಮನಸ್ಸು ಕಂಡುಕೊಳ್ಳಬಲ್ಲದೇನೋ ಎನ್ನಿಸುತ್ತದೆ. ಮನುಷ್ಯನಿಗೆ ತಿಳಿಯದ ನಿಗೂಡ ರಹಸ್ಯಗಳು ವಿಶ್ವದಲ್ಲಿ ನಮ್ಮ ಸುತ್ತಲೇ ಸುಳಿದಾಡುತ್ತಿವೆ ಎಂಬಂತೆ ಭಾಸವಾಗುತ್ತದೆ.
ಮೇಲಿನ ಘಟನೆಯ ನಿಗೂಢತೆಯನ್ನು ಬಿಟ್ಟು ಅದರಲ್ಲಿರುವ ಮನುಷ್ಯ ಹಾಗೂ ಪ್ರಕೃತಿಯ ಭಾವಾತ್ಮಕ ಸಂಬಂಧವನ್ನು ನೋಡಿದಾಗ, ಪ್ರತಿಯೊಬ್ಬ ಮನುಷ್ಯನೂ ತನ್ನ ಸುತ್ತ ಇರುವ ಪ್ರಕೃತಿಯಡನೆ ಆ ರೀತಿಯ ಸಂಬಂಧವನ್ನು ಇಟ್ಟುಕೊಳ್ಳುವುದಾದರೆ ನಮ್ಮ ಪರಿಸರಕ್ಕೆ ಅದೆಷ್ಟು ಕ್ಷೇಮ ಎನ್ನಿಸುದೆಲ್ಲವೇ.

1 comment:

  1. ನಿಜಕ್ಕೂ, ಮರ ಬೀಳುತ್ತಿರುವ ಸನ್ನಿವೇಶದ ಆಸುಪಾಸಿನ ಸಾಲುಗಳು ಮನಕಲುಕಿಬಿಟ್ಟವು.
    Nice Article

    ReplyDelete