Sunday, August 8, 2010

ಮಳೆ................?



ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತಲ್ಲವೇ ?
ಮಳೆ ಜೀವನಾಧಾರವಾದುದು, ಪ್ರಕೃತಿಯ ಉಳುವಿನ ಸಂಕೇತ, ಮಳೆ ಬಿದ್ದೊಡನೆ ಅದೆಷ್ಟು ಜೀವಗಳೀಗೆ ಸಂತಸ!
ರೈತರಿಗೆ ಬಿತ್ತನೆಗೆ ಭೂಮಿ ಹದವಾಯಿತು, ಮೃದುವಾಯಿತೆಂಬ ಖುಷಿ, ಪುಟ್ಟ ಮಕ್ಕಳಿಗೆ ಮನೆ ಮುಂದೆ ನಿಂತ ನೀರಲ್ಲ ಕಾಗದದ ದೋಣಿ ಬಿಡುವ ಸಂಬ್ರಮ , ಸುರಿದ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದುವ ಮಲಗುವ , ಬಿಸಿಬಿಸಿ ಪಕೋಡ ಬೋಂಡ ತಿನ್ನುವ ಉಮೇದು ಹಲವರಿಗೆ , ಕಾದು ಬೆಂಡಾಗಿದ್ದ ಧರಿತ್ರಿ
ತಂಪಾದಳಲ್ಲಾ! ಧಗೆ ಅಡಗಿತಲ್ಲಾ ಎಂಬ ಸಮಾಧಾನ ಮೊದಲ ಮಳೆಯ ಮಣ್ಣಿನ ವಾಸನೆ ಅನುಭವಿಸುವ ರಸಿಕತೆ ಕೆಲವರಿಗೆ ಸುರಿದ ಮಳೆಯಿಂದ ಸಿಕ್ಕ ಅನಿರೀಕ್ಷಿತ ಬಿಡುವಿನಿಂದ ಬಹಳ ದಿನಗಳಿಂದ ಉಳಿದ ಬಿಟ್ಟಿದ್ದ ಕೆಲಸಗಳನ್ನು ಪೂರೈಸುವ ಉತ್ಸಾಹ ಮತ್ತೆ ಕೆಲವರಿಗೆ.......................
ಮತ್ತೆ ಅದೆಷ್ಟು ಜನರಿಗೆ ಅದಿನ್ನಿನ್ಯಾವ ಬಗೆಯ ಸಂತಸವೋ ಉಣಿಸಲಾಗದಂತಹುದು !
ಬಿಡ ಬಿಡದೇ ಮೂರು ದಿವಸಗಳಿಂದ ಸುರಿಯುತ್ತಿರುವ ಬಿರು ಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ , ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ , ಮತ್ತೆರಡು ದಿನದಿಂದ ಉಪವಾಸ ಜೊತೆಗೆ ಮನೆಯಿಡೀ ಸೋರಿ ಕರೆಯಂತಗಿದೆ, ಮೂಲೆಯಲ್ಲೆಲ್ಲೋ ಇವನ ಹೆಂಡತಿ, ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ಅಪ್ಪ ಹಸಿವು ಎಂದು ಮಗುವೊಂದು ನುಡಿದು ಬಿಟ್ಟರೆ ಇವನೇನು ಮಾಡಬೇಕು ? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ.
ಇವನೊಬ್ಬ ಪುಟ್ ಪಾತ್ ವ್ಯಾಪಾರಿ ಬೀದಿಯಲ್ಲಿ ತನ್ನ ಸಣ್ಣ ಪುಟ್ಟ ಸಾಮಾನುಗಳನ್ನು ಹರಿವಿ ದಿನವಡೀ ಕುಳಿತದ್ದು , ಮಾರಾಟವಾದ ದಿನದಿಂದ ಇವನ ಸಂಸಾರಕ್ಕೆ ಉಪವಾಸವೇ ಗತಿ, ಇವನೊಬ್ಬನದೇ ಸಮಸ್ಯೆಯಲ್ಲ ಇದನ್ನೇ ನಂಬಿ ನೂರಾರು ಜನ ಬದುಕುತ್ತಿದ್ದಾರೆ , ಮಳೆಗಾಲದಂತೂ ಉಪವಾಸ ಅನಿವಾರ್ಯ , ಕೆಲವೊಮ್ಮೆ ಒಂದು , ಎರಡು ದಿನ ಮತ್ತೆ ಹಲವಾರು ಐದಾರು ದಿನ ಧೀರ್ಘ ಮಳೆ ಬಿಡದೆ ಹುಯ್ಯವ ಇಂತಹ ದಿನಗಳಲ್ಲಿ ಯೋಚಿಸುತ್ತಿದ್ದಾರೆ ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬುವುದು ? ಭಿಕ್ಷೆ ಬೇಡಿ ..........................ಕಳ್ಳತನ ಮಾಡಿ ......... ಅಥವಾ .....................
ಇಲ್ಲ ! ಇವೆಲ್ಲ ತಾನು ಮಾಡಲಾರೆ , ತನಗೆ ಗೊತ್ತಿರುವುದು , ಪುಟ್ ಪಾತ್ ವ್ಯಾಪಾರ ವೊಂದೇ ! ಧೋ ಎಂದು ಸುರಿವ ಮಳೆಗೆ ಮನ ಪೂರ್ತಿ ಬೈದು ಹಗುರವಾಗಬೇಕೆಂದು ಕತ್ತನ್ನು ಆಕಾಶ ದೆಡೆಗೆ ಎತ್ತಿದ್ದಾನೆ , ಅವನಿಗೆ
ಅರಿವಿಲ್ಲದೇ ಅವನ ಕಣ್ಣಿಂದ ಧಾರಕಾರ ನೀರು ಹರಿದು ತೊಡಗದೆ , ಎಷ್ಟೆಲ್ಲಾ ಜನರಿಗೆ ಸಂತಸ ನೀಡುವ ಮಳೆಯೇ ನನ್ನ ನನ್ನಂತಹ ಕೆಲವೇ ಕೆಲವರಿಗೆ ತೊಂದರೆಯಾದರೂ ಸರಿಯೇ ನೀ ಸುರಿಯಲೇಬೇಕು , ಎಂದು ಎದೆ ತುಂಬಿ ಪ್ರಾಥಿಸುತ್ತೇನೆ , ಈಗ ಮಳೆ ನಿಂತಿದೆ , ಮತ್ತೆ ಅವನ ವ್ಯಾಪಾರ ಭರದಿಂದ ಪ್ರಾರಂಭವಾಗಿದೆ..................,

* ರೂಪ.ಎಸ್

Tuesday, December 8, 2009

ಟೈಂಪಾಸ್‌ಗೆ ಪ್ರೀತಿನೆ ಬಲಿಕೊಡಬೇಕಾ ?


ಪ್ರೀತಿ ಆಕಸ್ಮಿಕವಾಗಿಯೇ ಶುರುವಾಗುವುದು, ಯಾರೂ ಕೂಡ ನಾನು ಅವಳನ್ನು ಅಥವಾ ಅವನನ್ನೇ ಪ್ರೀತಿಸುವುದು ಎಂದು ಚಿಕ್ಕಂದಿನಿಂದ ಗುರಿಯಾಗಿ ಇಟ್ಟುಕೊಂಡಿರುವುದಿಲ್ಲ,
ಮೊದಲು ಶುರುವಾಗುವುದು ಪ್ರೀತಿ, ನಗು, ನೋಟ, ಜಗಳ ಬೇಟಿ, ಲೆಟರ್ ಮೂಲಕವಾಗಿ ಪ್ರಾರಂಭವಾಗಬಹುದು, ಆದರೆ ನನ್ನ ಸ್ನೇಹಿತರು ಹೇಳುವ ಪ್ರಕಾರ ಪ್ರೀತಿ ಶುರುವಾದ್ದರಿಂದಲ್ಲಿ, ತಿಳಿಯದೇ ಅಂತಿಮ ಘಟ್ಟದಲ್ಲಿ ತಿಳಿಯಬಹುದು , ಪ್ರೀತಿಗೆ ಅಗೋಚರವಾದ ಶಕ್ತಿ ಇದೆ. ಹಾಗೆಯೇ , ಸುಮ್ಮನೆ ಟೈಂಫಾಸ್ ಗೆ ಪ್ರೀತಿ ಮಾಡುವವರೂ ಇದ್ದಾರೆ, ನನ್ನ ಕೆಲ ಸ್ನೇಹಿತರು ಹಾಸ್ಟಲ್ ನಲ್ಲಿ ಇರೋದು ಟೈಂಪಾಸ್ ಆಗ್ತಾ ಇಲ್ಲ ಯಾರನ್ನದರೂ ಪ್ರೆಂಡ್ ಮಾಡ್ಕೊಡೆ , ಇಲ್ಲಂದ್ರೆ ನಂಬರ್ ಕೊಡು ಅಂತ ಕೇಳಿದುಂಟು ,
ಆದುನೀಕರಣ ಬದಲಾದಂತೆ ಈಗ ಇರುವುದು ನೆಟ್ ಎಂಬ ಆಯುಷ , ಅಂದರೆ ಚಾಟಿಂಗ್ ಎಂಬ ಭೂತ , ನಿಮಗೆ ಯಾರು ಸ್ನೇಹಿತರು ನಂಬರ್ ಕೊಟ್ಟಿಲ್ಲ ಅಂದ್ರೆ ಏನಂತೆ , ಇದೆಯಲ್ಲ ಚಾಟಿಂಗ್ (ನೆಟ್), ಇದರಿಂದ ಅನೇಕ ಮಂದಿ ಸಿಗುತ್ತಾರೆ ,
ಆದರೆ ಟೈಂಪಾಸ್ ಮಾಡೋದಕ್ಕೆ ಅದ್ರಲ್ಲೂ ಪ್ರೀತಿನೇ ಬಲಿಕೊಡಬೇಕಾ, ಟೈಂ ಯಾವಾಗ್ಲೂ ಪಾಸ್ ಆಗ್ತಾನೇ ಇರುತ್ತೆ ನಾವು ಅದನ್ನು ಹೇಗಾದರೂ ಕಳೆಯಲು ಮನಸ್ಸು ಮಾಡ್‌ಬೇಕು ಅಷ್ಟೆ ,ಹೇಗೂ ಇನ್ ಪದವಿ ಮುಗಿತು ಮತ್ತೇ ಇನ್ನೇನು ನೀನ್ ಪ್ರೀತ್ಸಿರೋ ಹುಡುಗಿ ಜತೆ ಮದುವೆ ಯಾವಾಗ ಅಂತ ಕೇಳೀದ್ರೆ ಅದಕ್ಕೆ ಉತ್ತರ ನನಗೆ ಮೆಟ್ನಾಗೆ ಹೆಡೆದ ಹಾಗಿತ್ತು ,
ಏನು ಅವಳ ಜೊತೆ ಮದುವೆನಾ ! ವಾಟ್ ಮ್ಯಾನ್ ! ನಾನೆಲ್ಲಿ ಅವಳೆಲ್ಲಿ ನನಗೆ ಮದುವೆ ಹುಡುಗಿ ಬೇರೆ ತರಾನೆ ಇರಬೇಕು ಅಂತ ಕನಸಿದೆ, ಆದರೆ ಇವಳ ಜೊತೆ ಹೇಗೂ ಈ ಊರಲ್ಲಿ ಯಾರೂ ಪ್ರೆಂಡ್ಸ್ ಇರಲಿಲ್ಲ ಅಂತ ಅವಳನ್ನು ಪ್ರೆಂಡ್ ಮಾಡ್ಕೊಂಡೆ , ಸುಮ್ನೆ ಒಂದು ತಿಂಗಳು ಸುತ್ತಾಡಿ, ಮಜಾ ಮಾಡನಾ ಅಂತ ಅಷ್ಟೆ , ಆದರೆ ಪ್ರೀತಿ ಬಲೆಗೆ ಬಿದ್ದ ಹುಡುಗಿಗೆ ಅರಿವಾದದ್ದು ಹುಡುದ ಕೈಕೊಟ್ಟಾಗ .
ಈ ಹುಡುಗ (ಹುಡುಗಿಯರಿಗೆ) ಪ್ರೀತಿ ಅಂದ್ರೆ ಅಷ್ಟು ಸಸಾರವಾಗಿ ಬಿಟ್ಟಿದೆಯಾ ಅನ್ನಿಸಿತು , ಟೈಂಪಾಸ್ ಪ್ರೀತಿಗೂ ಬಾಹ್ಯ ತೋರಿಕೆಯಲ್ಲಿ ಹೋಲಿಕೆ ಇದ್ದರೂ ಅಂತರಂಗದಲ್ಲಿ ನಿಜವಾದ ಪ್ರೀತಿಗೆ ಅವರದೇ ಸ್ಥಾನವಿದೆ .
ಈಗಿನ ಪೀಳಿಗೆಯಲ್ಲಿ ಟೈಂಫಾಸ್ ಪ್ರೀತಿಯಷ್ಟು ಕೆಟ್ಟ ಹವ್ಯಾಸ ಇನ್ನೊಂದಿಲ್ಲ ಇದು ಕೊನೆಗೊಳ್ಳುವ ವುದು ಅನಾಹುತದಿಂದ ಅಷ್ಟೆ , ಅದು ಆತ್ಮಹತ್ಯಗೂ ಎಡೆಮಾಡುವುದೆಂದರೆ ತಪ್ಪಿಲ್ಲ, ಪ್ರೀತಿಯಲ್ಲಿ ಒಂದು ಎಳ್ಳಾಷ್ಟಾದರೂ ಸ್ವಾರ್ಥವಿರೆದೆ ಇರಲಾರದು , ಆದರೆ ಅದೇ ವಿಷವಾಗಬಾರದು . ಪ್ರೀತಿಸಲು ನನ್ನ ಪ್ರಕಾರ ಮೂರು ಗುಣಗಳು ಅಗತ್ಯ ಒಂದು ತನ್ನನ್ನು ತಾನು ಪ್ರೀತಿಸಿ ನಂತರ ಪ್ರೀತಿಯನ್ನು , ಪ್ರೀತಿಸುವುದು ಎರಡೂ ಕೂಡ , ನಂತರ ಜೀವನ ನಿರ್ವಹಿಸಲು ಆರ್ಥಿಕವಾಗಿ ಸಬಲವಾಗಿದ್ದಾರೆ ಹುಡುಗ(ಗಿ)ಯನ್ನು ಪ್ರೀತಿಸುವುದು,
ನನ್ನ ಕೆಲವು ಗೆಳೆಯ/ಗೆಳತಿಯರ ಮೊಬೈಲ್ ನಲ್ಲಿ ಬಹಳ ಹುಡುಗಿಯರ ನಂಬರ್ ಇದ್ದವು ನಾನು ಕೇಳಿದಾಗ ಇವೆಲ್ಲ (ಜಸ್ಟ್ ಫ್ರೆಂಡ್ ) ಗಳು ಕೊನೇದು ರಿಯಲ್ ಲೌವ್ ಅಂದ ,
ಆದರೆ ಇವನು ಅವಳ ಮೊದಲನೇ ಟೈಂಪಾಸ್ (ಬಕ್ರಾ) ಹುಡುಗ/ಗಿ , ಅವಳ ರಿಯಲ್ ಹೀರೋನೇ ಬೇರೆ ಹೀಗಿರುವಾಗ ರೋಮೀಯೋ ಜೂಲಿಯಟ್ ನೂರಲ್ಲಿ ಒಂದು ಅಷ್ಟೆ .
ಕೆಲವೊಮ್ಮೆ ಹುಡುಗಿ ಜೂಲಿಯಟ್‌ಗಿಂತ ಒಂದು ಪಟ್ಟು ಹೆಚ್ಚು ಪ್ರೀತಿಸಿದರೂ , ಹುಡುಗ ಮಾತ್ರ ಮಾಡುವುದು ಟೈಂಫಾಸ್ , ಇವಳಿಗೆ ತಿಳಿದ ಮೇಲೆ ಏನಾದರೂ ಸೆಲೆಕ್ಟ್ ಮಾಡ್ಕೊತ್ತಾರೆ . ಹೀಗಿರುವಾಗ ಹುಡುಗ ಹುಡುಗಿಯ ನಡುವೆ ಇರುವ ಪ್ರೀತಿಯ ಸೇತುವೆ ಟೈಂಪಾಸ್‌ಗಾಗಿ ಎನ್ನುವ ಕಾರಣಕ್ಕೆ ಮುರಿದು ಬಿದ್ದರೆ ಯಾರು ಹೊಳೆಹಾರುವರೋ ಗೊತ್ತಿಲ್ಲ .
ಹೀಗೆ ಕಾಲೇಜ್ ವಿಶ್ವವಿದ್ಯಾನಿಲಯಗಳಲ್ಲಿ ದಿನ ನಿತ್ಯ ಅದೆಷ್ಟು ಪ್ರೇಮಿಗಳು ಅಣಬೆಗಳಂತೆ ಹುಟ್ಟುತ್ತಾರೋ ಗೊತ್ತಿಲ್ಲ, ದರೆ ಲಾಭ ಇರುವುದೆಂದರೆ ಪ್ಯಾನ್ಸಿ ಗ್ರೀಟಿಂಗ್ಸ್ ಅಂಗಡಿಯವರಿಗೆ ಮಾತ್ರ .ಇದನ್ನು ಓದಿದ ನಿಜವಾದ ಪ್ರೀಮಿಗಳಿಗೆ ಹಾಗು ಟೈಂಪಾಸ್ ಪ್ರೇಮಿಗಳಿಗು ಬೇಸರವಾದರೆ ಕ್ಷಮಿಸಿ ಆದರೆ ಈ ಅನಿಸಿಕೆಗಳಲ್ಲಿ ಸಾಕಷ್ಟು ಸತ್ಯ ಇದೆ ಎನ್ನುವುದು ನನ್ನ ಭಾವನೆ .

ರೂಪ.ಎಸ್

ಎಲ್ಲ ಓಕೆ,,ಮದುವೆ ಲೇಟ್ ಯಾಕೆ ?


ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಒಂದು ಮದುವೆ , ಅಂದ ಮೇಲೆ ಅದು ಸರಿಯಾಗಿ ಆಗಬೇಡವೇ ? ಇದು ಇಂದಿನ ಬಹುತೇಕ ಯುವಜನರು ವ್ಯಕ್ತಪಡಿಸುವ ಅಭಿಪ್ರಾಯ ? ಹೌದು ಮದುವೆಯೆನ್ನುವದು ಒಂದು ಸಂಸ್ಕಾರ , ಅದೊಂದು ಶುಭಕಾರ್ಯ, ಎರಡು ಆತ್ಮಗಳ ಪವಿತ್ರ ಮಿಲನ ಜೀವನದಲ್ಲಿ ಮದುವೆ ಎನ್ನುವುದು ಒಂದು ಮುಖ್ಯ ಘಟ್ಟ , ಹದಿನಾರು ಸಂಸ್ಕಾರಗಳಲ್ಲಿ ಒಂದು ಎರಡು ಆತ್ಮಗಳನ್ನು ಹತ್ತಿರ ತಂದು ಜೀನವವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಒಂದು ಸಾಮಾಜಿಕ ಕಟ್ಟಳೆ ಇದು, ಆದರೆ ಈ ಸಂಸ್ಕಾರ ದ ಆಚರಣೆಗೆ ಈ ದಾರ್ಮಿಕ ವಿದಿ ಪೂರೈಕೆಗೆ ಇಂದಿನ ಯುವಜನತೆ ಮೊದಲ ಪ್ರಾಶಸ್ತ್ಯ ಕೊಡುತ್ತಿಲ್ಲ, ಮದುವೆ ಭಾರತೀಯ ಶಿಕ್ಷಿತ ಹಾಗೂ ನಗರವಾಸಿ ಯುವಕ ,ಯುವತಿಯರ ಬದುಕಿನ ಪ್ರಥಮ ಆದ್ಯತೆಗುಳಿದಿಲ್ಲ , ಉದ್ಯೋಗ ಅಂದರೆ ತಮ್ಮ ಆರ್ಥಿಕ ಸಬಲತೆಗೆ ಅವರು ಪ್ರಥಮ ಆದ್ಯತೆ ನೀಡುತ್ತಿದ್ದಾರೆ .
ಓದಿದ್ದಾಯಿತು ವರ್ಷ ಇಪ್ಪತ್ತೊಂದಾಯಿತು ಇನ್ನೂ ಮದುವೆಯಾಗಿ ಹಿರಿಯರು ಮಾಡಿಟ್ಟ ಆಸ್ತಿ ಪಾಸ್ತಿ ನೋಡಿಕೊಂಡು ಅಥವಾ ಅವರ ಉದ್ಯೋಗ ಮುಂದುವರೆಸಿಕೋಡು ಹೋಗುವ ಮನೋಬಾವ ಇಂದಿನ ಯುವಕರರಲಿಲ್ಲ , ಇನ್ನು ಯುವತಿಯರತ್ತ ದೃಷ್ಟಿ ಹರಿಸಿದರೆ ಹೆಣ್ಣಿಗೆ ಮನೆ ಗಂಡಿಗೆ ಜಗತ್ತು ಎಂಬ ಕಾಲದಿಂದ ಹತ್ತಿರ ಬಂದಿದ್ದಾರೆ, ಹುಡುಗಿಗೆ ಹದಿನೈದಾದರು ಇನ್ನು ಮದುವೆ ಯಾಗಿಲ್ಲ ಎಂಬ ಅಂದಿನ ಮಾತುಗಳಿಗೆ ಇಂದು ಬೆಲೆಯಿಲ್ಲ, ತಮ್ಮ ಮದುವೆಯ ಸಮಯಕ್ಕೆ ಯುವಕರಿಗೆ ಇಪ್ಪತ್ತವೋಂದು ವರ್ಷ ತುಂಬಿರಲೇಬೇಕು ಎನ್ನುತೆ ಕಾನೂನು,
ವಯಸ್ಸಿನ ಮಾತು ಹಾಗಿರಲಿ ಮದುವೆಗಿಂತ ನಮ್ಮ ಬದುಕು ,ಭವಿಷ್ಯ ಮುಖ್ಯ ಎನ್ನುವ ಯುವಜನೆತೆಯ ನಂಬಿಕೆ .ಈಗ ಅಧಿಕವಾಗಿದೆ ೩೦ ಮೀರಿದರೂ ಮದುವೆಯ ಬಗ್ಗೆ ಚಿಂತಿಸದೆ ಉದ್ಯೋಗ ಬದುಕಿನ ಸ್ಥಿರತೆ ಸಾಮಜಿಕ ಸ್ತಾನಮಾನ ಮುಂತಾದವುಗಳ ಬಗ್ಗೆ ಯೋಚಿಸುವ ಯುವಜನರ ಸಂಖ್ಯೆ ಹೆಚ್ಚಿದೆ , ಬದುಕಿನ ಆರ್ಥಿಕ ಬದ್ರತೆ ಹಿನ್ನಲೆಯಲ್ಲಿ ಮದುವೆ ಮುಂದೂಡುವ ಸುಶಿಕ್ಷಿತ ಯುವಕ ,ಯುವತಿಯರ ಸಂಖ್ಯಯಲ್ಲಿ ಹೆಚ್ಚಳ ಕಂಡುಬಂದಿದೆ ,
ಮದುವೆ ಎಂಬ ದಾರ್ಮಿಕ ವಿಧಿಯ ಆಚರಣೆಯನ್ನು ಇಂದಿನ ಯುವಜನತೆ ಬಹು ಅದ್ದೂರಿಯಾಗಿ ವಿಜೃಂಬಣೇಯಿಂದ ನೆರವೇರಿಸಲು ಅಪೇಕ್ಚೆ ವ್ಯಕ್ತಪಡಿಸಿದರೂ ಯುವಕ , ಯುವತಿಯರು ತಮ್ಮ ಉದ್ಯೋಗ ಸಂಪಾದನೆಗಳತ್ತ ಒಲವು ತೋರಿ ವಿವಾಹಗಳನ್ನು ಮುಂದೂಡುತ್ತಾರೆ
ಈಗಿನ ಕಾಲಮಾನ ಸಾಕಷ್ಟು ಬದಲಾವಣೆ ಕಂಡಿವೆ , ಜನಸಂಖ್ಯೆ ಹೆಚ್ಚಳ ಸಂಪನ್ಮೂಲಗಳ ಕೊರತೆ ನಿರುದ್ಯೋಗದ ಸಮಸ್ಯೆಗಳನ್ನು ಸೃಷ್ಟಿಸಿದೆ , ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗುವ ಅವಶ್ಯಕತೆ ಇಂದು ಹೆಚ್ಚಿದೆ ಓದಿದ ಮಾತ್ರಕ್ಕೆ ಉದ್ಯೋಗ ದೊರಕದೆ ಆರ್ಥಿಕ ಸಂಪಾದನೆಯಾಗದು ಅಂತೆಯೇ ಅದ್ದೂರಿಯ ಮದುವೆ ಆ ಬಳಿಕ ಜೀವನ ನಿರ್ವಹಣೆ ಎಲ್ಲವೂ ಇಷ್ಟ ಸಾಧ್ಯವೇ ? ಹೀಗಾಗಿ ಬಹುಪಾಲು ಯುವ ಜನತೆ ತಮ್ಮ ಆರ್ಥಿಕ ನೆಲೆಗಟ್ಟು ಭದ್ರವಾಗುವ ತನಕ ಮದುವೆಯನ್ನು ಮುಂದೂಡುತ್ತಾರೆ ಇದು ಯುವಕರ ಮಾತಾದರೆ , ಯುವತಿಯರೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಾರೆ.
ಮದುವೆಗೆ ಮುಂಚೆ ಮನೆಯಲ್ಲಿ ಸುಮ್ಮನೆ ಕುಳಿತಿರುವ ಯುವತಿಯರಿಲ್ಲ, ಮದುವೆಗೆ ಮುಂಚೆ ಹುಡುಗಿ ಉದ್ಯೋಗ ದಲ್ಲಿದ್ದರೆ ಅವಳು ಹೆತ್ತವರಿಗೆ ಬಾರವಾಗುವುದಿಲ್ಲ , ಅವಳ ಸಂಪಾದನೆಯಿಂದ ಮನೆಗೂ ಸಹಾಯವಾಗುತ್ತದೆ , ಮುಂದಾಗಲಿರುವ ಮದುವಗಾಗಿ ಹಣ ಒಡವೆ ಮಾಡಿಟ್ಟು ಕೊಳ್ಳುತ್ತಾರೆ , ಹಿಂದೆ ಯುವಕರು ಹೇಳುತ್ತಿದ್ದ ಮೊದಲು ಉದ್ಯೋಗ ನಂತರ ಮದುವೆ ಎಂಬ ಮಾತನ್ನು ಇಂದು ಯುವತಿಯರು ಹೇಳುತ್ತಿದ್ದಾರೆ.
ಆದುನಿಕ ಕಾಲಕ್ಕೆ ತಕ್ಕಂತೆ ಯುವಕ ಯವತಿಯರ ಮನೋಭಾವವೂ ಬದಲಾಗಿರುವುದು ಮದುವೆಗಳನ್ನು ಮುಂದೂಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂದಿನ ತರುಣಿಯರು ಮದುವೆಯಾಗಿ ಮನೆಯಲ್ಲೇ ಉಳಿಯಲು ಬಯಸರು , ಆದುನಿಕತೆ ಸೌಕರ್ಯಗಳು ಇರುವ ಗಂಡ-ಹೆಂಡತಿ ಮಾತ್ರ ವಾಸವಾಗಿರಲು ಅವಕಾಶವಿರುವ ನಗರದಲ್ಲಿರಬಹುದಾದ ಕಡೆಗೆ ಹೆಚ್ಚಾಗಿ ಒಲವು ತೋರುತ್ತಾರೆ .
ಕೃಷಿಯನ್ನು ನಂಬಿಕೊಂಡು ತಂದೆ ತಾಯಿಗಳೊಂದಿಗೆ ವಾಸವಾಗಿರುವ ಯುವಕರಿಗೆ ಮದುವೆಯ ಸಂದರ್ಬಗಳು ಒದಗಿಬರುವುದು ತಡವಾಗಿಯೇ , ಹಿಂದಿನಂತೆ ಮನೆಗೆಲಸಗಳನ್ನು ಮಾಡುತ್ತಾ, ಮನೆಯಲ್ಲೇ ಕುಳಿತಿರಲು ಈ ಗಿನ ಯುವತಿಯರು ಬಯಸರು , ಯುವಕರೂ ಅಷ್ಟೇ , ಆದೆಷ್ಟು ನಗರ ಪ್ರದೇಶಗಳ ಕಡೆಗೆ ಉದ್ಯೋಗ ವನ್ನರಸುತ್ತಾ ಸಾಗುತ್ತಾರೆ.
ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ವರಮಾನಕ್ಕೆ ಸಂಪಾದನೆಗೆ ಸೂಕ್ತ ಅವಕಾಶ ಸಿಗುವ ತನಕ , ಮದುವೆಯ ಬಗ್ಗೆಯೇ ಯೋಚನೆ , ಮದುವೆ ಎಂಬುದು ಒಂದು ಬಂದನ , ಎಂಬ ಅರಿವು ಯುಜನತೆಯಲ್ಲಿ ಆದಾಗಲೇ ಮೂಡಿದೆ. ಪ್ರಸ್ತುತ ಆದುನಿಕ ಬದುಕಿನ ದಾಂಪತ್ಯ ಕಹಿ ಪ್ರಕರಣಗಳನ್ನು ನೆರೆಹೊರೆಯವರಲ್ಲಿ ಪತ್ರಿಕೆಗಳಲ್ಲಿ ನೋಡಿ ಕೇಳೀ ತಿಳಿದುಕೊಳ್ಳು ವ ಇಂದಿನ ಯುವ ಜನರು ಆದೆಷ್ಟು ಮದುವೆಯನ್ನು ಮುಂದೂಡಲು ಪ್ರಯತ್ನಿಸುತ್ತಿದ್ದಾರೆ,
ಮೊದಲೆಲ್ಲ ವಿವಾಹದ ವಯಸ್ಸು ಬಂತೆಂದರೆ ಹೆತ್ತವರಿಗೆ ತಲೆಬಿಸಿ ಸಾವಿರ ಸುಳ್ಳೂ ಹೇಳಿ ಮದುವೆ ಮಾಡಬೇಕಾದ ಅನಿವಾರ್ಯತೆ ಇತ್ತು, ಮಗಳ ಕನ್ಯಾ - ಸೆರೆ ಬಿಡಿಸಲು ಆಸ್ತಿ-ಪಾಸ್ತಿ ಮಾರುವ ಅಗತ್ಯತೆ ಅನಿವಾರ್ಯವಾಗಿತ್ತು, ಜೀವನ ನಿರ್ವಹಣೆಯನ್ನು ಬದಿಗೊತ್ತಿ ಕೇವಲ ವಿದಿಯೊಂದರ ಆಚರಣೆಗೆ ಮಾಡಬೇಕಾದ ಖರ್ಚು , ಅದಕ್ಕಿಂತ ತೊಳಲಾಟ, ಪರದಾಟ , ಇಷ್ಟೆಲ್ಲವೂ ದಾಂಪತ್ಯ ಬದುಕಿಗೆ ಅಡ್ಡಿಯಾಗದಿರುವುದು ವೈಶಿಷ್ಟವೇ ಆದರೂ ಇಂದು ಕೈಗಾರೀಕರಣ ಆರ್ಥಿಕ ಮುನ್ನಡೆ, ಹಳೆಯ ನೈತಿಕ ಮೌಲ್ಯಗಳನ್ನು ಒರೆಗೆ ಹಚ್ಚಿ ನೋಡುವ ಆದುನಿಕ ವಿಚಾರದಾರೆ ತ್ರೀವವಾಗಿರುವ ಮಹಿಳಾ ವಿಮೋಚನಾ ಒತ್ತಾಸೆ , ಸಮಾನ ಮನಸ್ಸಿನ ಅಭಾವ, ಸಂಶಯ , ಪ್ರೇಮ ವಂಚನೆ ಪ್ರಕರಣಗಳು ಹಾಗೂ ಕೇವಲ ಪಾರಂಪರಿಕ ಕಾರಣಗಳಿಂದಾಗಿ ಇಂದು ಬಾರತೀಯ ದಾಂಪತ್ಯ ಬದುಕು ಕಳೆಗುಂದಿದೆ.
ಇಂದು ಸಮಾನ ಮನಸ್ಸಿನ ಅಭಾವ ಆದುನಿಕ ದಂಪತಿಗಳಲ್ಲಿ ಎದ್ದು ಕಾಣುವ ಪ್ರಧಾನ ಅಂಶವಾಗಿದೆ, ಇತ್ತೀಚೆಗೆ ಹೆಚ್ಚುತಿರುವ ವಿವಾಹ ವಿಚ್ಚೇದನೆ ಪ್ರಕರಣಗಳು ದಾಂಪತ್ಯ ಜೀವನದಲ್ಲಿರುವ ಬಿರುಕುಗಳನ್ನು ಎತ್ತಿ ತೋರಿಸುತ್ತದೆ.
ಔದ್ಯೋಗಿಕ ಕಾರಣದಿಂದಾಗಿ ಹುಟ್ಟಿಕೊಂಡ ನಮ್ಮ ಬೃಹತ್ ನಗರಗಳ ಯುವಜನತೆಗೆ ಇಂದು ಮದುವೆ ಪ್ರಥಮ ಆದ್ಯಯತೆಯಲ್ಲಿ , ಆಶಾಶ್ವತವಾದ ಈ ಬದುಕಿನಲ್ಲಿ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯುವಜನತೆ ನಿರತರಾಗಿದ್ದಾರೆ, ಬದುಕಿನಲ್ಲಿ ಒಂದು ಸ್ಥಾನಮಾನ ಗಳಿಸಿಕೊಂಡಿರುವ ಮೇಲೆಯೇ ಮದುವೆಯ ಮಾತು ಎಂಬುದು ಇವರ ನಿರ್ದಾರವಾಗಿದೆ .
ಒಟ್ಟಿನಲ್ಲಿ ಹೇಳುವುದಾದರೆ ಎರಡು ಆತ್ಮಗಳನ್ನು ಹತ್ತಿರ ತಂದು ಜೀವನವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಈ ಸಾಮಾಜಿಕ ಕಟ್ಟು ಕಟ್ಟಳೆಯಾದ ಮದುವೆಯನ್ನು ಮುಂದೂಡುವುದರಿಂದ ಮುಂದಿನ ಬದುಕಿನಲ್ಲಿ ಬಂದರೆಗುವ ನಾನಾ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ , ಓದು ಸೇರಿದಂತೆ ಉದ್ಯೋಗ ಆ ಮೂಲಕ ಆರ್ಥಿಕ ಸಬಲತೆಗೆ ಪ್ರಮುಖ ಪ್ರಾಶಸ್ಯ ಕೊಡಬೇಕಾಗಿದ್ದು ಇಂದಿನ ಅಗತ್ಯ ಹಾಗೆ ಮಾಡದೆ ಮೊದಲೇ ಮುದುವೆಯಂಬ ಬಂದನಕ್ಕೆ ಒಳಗಾಗಿ ಜೀವನ ರಥವನ್ನು ಸಾಗಿಸಲಾಗದೆ ಹೆತ್ತವರಿಗೆ ಹೊರೆಯಾಗಿ ಸಮಾಜಕ್ಕೂ ತೊಂದರೆ ಕೊಡುವಂತಾಗಬಾರದು ,
ಸಂಸಾರವೆಂಬ ಸಾಗರದ ಈಜಿ ದಾಟಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು , ಅತ್ಯಗತ್ಯ ಅಂತಹ ಪೂರ್ವ ಸಿದ್ದತೆಗಳೊಂದಿಗೆ ಮದುವೆಯಂಬ ಧಾರ್ಮಿಕ ವಿದಿಗೆ ಅಡಿ ಇಟ್ಟರೆ ಮುಂದೆ ಸಂಸಾರಿಕ ಜೀವನ ಸುಗಮವಾಗಿ ಸಾಗಲು ಸಾದ್ಯ ನೀವೇನಂತೀರ ?

ರೂಪ.ಎಸ್

Monday, November 30, 2009

ಉದ್ಯಾನ ನಗರದಲ್ಲೊಂದು , ಧನ್ವಂತರಿ ವನ,


ನಗರದ ಜ್ಙಾನ ಭಾರತಿ ಆವರಣದಲ್ಲಿ ದನ್ವಂತರಿ ವನ ಒಂದು ಸದ್ದಿಲ್ಲದೆ ತಲೆ ಎತ್ತುತ್ತಿದೆ, ಗಿಡ ಮೂಲಿಕೆ ಔಷಧಗಳ ಮೂಲಕ ನಾನಾ ರೋಗ ನಿವಾರಣೆ ಸಾದ್ಯ ಎಂಬ ಅಂಶವನ್ನು ಮುಖ್ಯವಾಗಿಟ್ಟು ಕೋಂಡು ಈ ವನದಲ್ಲಿ ಹಲವು ವಿಧದ ಔಷದಗಳ್ಳನ್ನು ಬೆಳೆಯಲಾಗುತ್ತಿದೆ.
ಬೆಂಗಳೂರಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಸ್ಯ ಕಾಶಿಯೇ ನಾಶವಾಗುತ್ತಿರುವ ಸಂದರ್ಬದಲ್ಲಿ ಸಂಸ್ಥೆಯೊಂದು ಸಕಲ ರೋಗಗಳಿಗೂ ಉಪಯುಕ್ತವಾಗುವ ಔಷದ ಗುಣವುಳ್ಳ ಸಸ್ಯಗಳನ್ನು ಸದ್ದಿಲ್ಲದೆ ಬೆಳೆಸುತ್ತಿದೆ !
ಆ ಜಾಗದ ಹೆಸರು ಧನ್ವಂತರಿ ವನ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನ ಭಾರತಿಯ ಆವರಣದಲ್ಲಿ ಈ ವನ ತಲೆ ಎತ್ತಿದೆ . ಭಾರತೀಯ ವೈದ್ಯ ಪದ್ದತಿ ಮತ್ತು ಹೋಮೀಯೋಪತಿ ಇಲಾಖೆ , ಕರ್ನಾಟಕ ಅರಣ್ಯ ಇಲಾಖೆ ಹಾಗು ಬೆಂಗಳೂರು ವಿ.ವಿ.ಸಹದ್ಯೋಗದೊಂದಿಗೆ, ಐ.ಎಸ್.ಎಂ ಎಂಬ ಖಾಸಗಿ ಸಂಸ್ಥೆಯು , ಜ್ಙಾನ ಬಾರತಿಯ ೪೨.೩೭ ಎಕರೆ ಜಾಗದಲ್ಲಿ, ಔಷದ ಸಸ್ಯಗಳನ್ನು ಬೆಳೆಸುತ್ತಿದೆ. ಇಲ್ಲಿ ಮುಖ್ಯವಾಗಿ ಮದುಮೇಹ, ಸೌಂದರ್ಯವರ್ದಕ, ಗರ್ಬಕೋಶದ ಕಾಯಿಲೆ , ಕೆಮ್ಮು ದಮ್ಮು, ಕುಷ್ಠ ರೋಗ, ಮೂಳೆ ಮುರಿತ , ಕೀಲು ನೋವು, ಚರ್ಮವ್ಯಾದಿ, ಮೊಡವೆ , ಬಾವು, ರಕ್ತಸ್ತರಾವ, ನೇತ್ರ ರೋಗ, ಪಾಶ್ಚಯ ವಾಯು, ಜ್ಞಾಪಕ ಶಕ್ತಿ ಕೊರತೆ ,ಉರಿಮೂತ್ರ, ಅಸ್ತಮ , ದಂತ ರೋಗ , ಹಾಗು ಸ್ತ್ರೀ ಸಂಬಂದ ರೋಗಗಳಿಗೆ ಪರಿಹಾರ ನೀಡುವ ಗಿಡ ಮೂಲಿಕೆ ಸಸ್ಯಗಳಿವೆ , ಇನ್ನೂರಕ್ಕೂ ಹೆಚ್ಚಿನ ಔಷಧ ಸಸ್ಯಗಳು ಇಲ್ಲಿವೆ , ಕೆಲವು ಗಿಡಗಳು ಉಪಯೋಗಕ್ಕೆ ಬಂದರೆ ಮತ್ತೆ ಕೆಲವು ಸಸ್ಯಗಳ, ಬೇರು ಉಪಯುಕ್ಕ್ಕೆ , ಇನ್ನು ಕೆಲವು ಗಿಡಗಳ ಕಾಂಡ ಪ್ರಯೋಜನ ಕಾರಿ ,
ಧನ್ವಂತರಿಯ ಇತಿಹಾಸ :
ಆರೋಗ್ಯವನ್ನು ಕಾಪಾಡುವುದು ಆರ್ಯುವೇದ ಎಂಬ ಮಾತಿದೆ . ವಿಷ್ಣುವಿನ ಮೂಲ ಅವತಾರವಾದ ದನ್ವಂತರಿ, ಅಶ್ವಿನಿ ಕುಮಾರರ, ಆರ್ಯುವೇದದ ಪಿತಾಮಹ ಎಂಬ ಪ್ರತೀತಿ ಇದೆ, ದನ್ವಂತರಿ ಎಂದರೆ, ಆದಿ ದೈವ ಔಷದ , ಆಯುರ್ವೇದದ ಮೂಲ ಕೂಡ ದನ್ವಂತರಿ ಎಂಬ ಮಾತಿದೆ , ಶತಮಾನಗಳ ಇತಿಹಾಸ ಹೊಂದಿರುವ ದನ್ವಂತರಿ ಎಂಬ ಆರ್ಯುವೇದದ ಬಗ್ಗೆ ಮೊದಲು ಬಾಯಿಂದ ಬಾಯಿಗೆ ಅದರ ಜ್ಞಾನ ಪ್ರಸಾರವಾಗುತ್ತಿದೆ. ಆದರೆ ಮೂರು ಸಾವಿರ ವರ್ಷಗಳ ಈಚೆಗೆ ಪುಸ್ತಕ ರೂಪದಲ್ಲಿ ಜನರ ನಂಬಿಕೆಗೆ ಪಾತ್ರವಾಗಿ ಪ್ರಾಮುಖ್ಯ ಪಡೆದಿದೆ , ಈ ಆರ್ಯುವೇದ ಪದ್ದತಿ , ಪಂಚಭೂತಗಳಾದ ವಾಯು, ಭೂಮಿ, ಜಲ, ಅಗ್ನಿ, ಆಕಾಶ ಇವುಗಳ ಮೂಲ ರೂಪ ಆಯುರ್ವೇದ ಮೂಲತಃ ದೇಶೀಯ ಪದ ಇದು ಇತ್ತೀಚೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡಿದೆ ಆದರೆ ಇಲ್ಲಿ ,
ದನ್ವಂತರಿ ವನ ಪ್ರಾರಂಬವಾಗಿದ್ದು ೧೯೮೭ರಲ್ಲಿ ಆದರೆ ಇದುವರೆಗು ಬೆಂಗಳೂರಿನ ಹೆಚ್ಚಿನ ಜನರಿಗೆ ಇದರಬಗ್ಗೆ ತಿಳಿದಿಲ್ಲ , ಗೊತ್ತಿರುವವರು ಮಾತ್ರ ಇಲ್ಲಿಗೆ ಬಂದು ತಮಗೆ ಬೇಕಾದ ಗಿಡಗಳನ್ನು ಖರೀದಿಸುತ್ತಾರೆ, ಇಲ್ಲಿ ಎಲ್ಲ ಸಸ್ಯಗಳಿಗು ಮನುಷ್ಯನ ಒಂದಿಲ್ಲೊಂದು ರೋಗವನ್ನು , ನಿವಾರಣೆ ಮಾಡುವ ಶಕ್ತಿ ಇದೆ, ಇಲ್ಲಿ ಬೆಳೆಯುವ ಪ್ರತಿಯೊಂದು ಔಷದ ಸಸ್ಯದ ಬೆಲೆ ೧.೫೦ ರೂ, ಗಳಿಂದ ೩ರೂ ಮಾತ್ರ .
ಸಸ್ಯದ ಉಪಯೋಗ :
ಗುಲಗಂಜಿ ಬಳ್ಳಿ, (ಉಪಯಕ್ತ ಬಾಗ ಎಲೆ., ನಿವಾರಕ ರೋಗ ಗಂಟಲು ನೋವು) ,ಮದುನಾಶಿನಿ (ಮದುಮೇಹ ),ಉಂಚಿಕ (ಚರ್ಮಕ್ಕೆ ಸಂಬಂದಿಸಿದಂತೆ )ಸೀತೆ ಅಶೋಕ ಗರ್ಬಕೋಶ, ಅಮೃತ ಬಳ್ಳಿ- ಕಾಮಲೆ , ಇದರ ಬಗ್ಗೆ ಸಂಸ್ಥೆ ಸಿಬ್ಬಂದಿ ಜಾಗೃತ ವಹಿಸಬೇಕಾಗಿದೆ, ಇಲ್ಲಿ ಸಿಗುವ ಸಸ್ಯಗಳು ಹಾಗು ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆಯು , ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ .ಆಯುರ್ವೇದದ ವೈದ್ಯರಾದ ಕೆ.ಸಿ.ಬಳ್ಳಾಳ್ ಪ್ರಕಾರ ಗಿಡ ಮೂಲಿಕೆಗಳು ಇಂಗ್ಲೀಷ್ ಔಷದಕ್ಕಿಂತ ಹೆಚ್ಚು ಪರಿಣಾಮಕಾರಿ, ಆಹಾರ ರೂಪದಲ್ಲಿ ದೇಹವನ್ನು ಸ್ವಾಭಾವಿಕವಾಗಿ ಸದೃಡಗೊಳಿಸುತ್ತಾ ಆರೋಗ್ಯವನ್ನು ಕಾಪಾಡುವುದೇ ಈ ಆಯುರ್ವೇದದ ಮಹತ್ವ.
ರೂಪ.ಎಸ್,

Tuesday, November 24, 2009

ನಿಜವಾದ ಪ್ರೀತಿ ಅಂದರೆ ಇದೇನಾ?



ಅನಿಸುತಿದೆ ಏಕಿಂದು ಮನಸೆಲ್ಲಾ ಖಾಲಿ ಖಾಲಿ ಎಂದು? ಅರಳಿದ ಹೂನಂತಿದ್ದುದು ಇಂದು
ಬಾಡಿದೆ ಎಂದು! ಬರಡು ಭೂಮಿಯಲ್ಲಿ ನೀರಿಲ್ಲದೆ ಬಿದ್ದಿರುವ ಜೀವದಂತೆ ನಾ
ಕಾಯುತ್ತಿದ್ದೇನೆ ನೀ ಬರುವ ಹಾದಿಯಲ್ಲೇ.. ಆದರಿಂದು ಅನಿಸುತಿದೆ ಮನಸೆಲ್ಲ ಖಾಲಿ ಖಾಲಿ
ಎಂದು..!

ಅದೊಂದು ಗಳಿಗೆ ನಾ ನಿತ್ಯ ನಿನ್ನ ನೋಡುತ್ತಿದ್ದೆ .ನಿನ್ನ ಮುಂದೆ ನಿಂತು ನೋಡಲೂ
ಹೆದರುತ್ತಿತ್ತು ನನ್ನೀ ಮನಸ್ಸು . ನೀ ಎಂದು ನೋಡುವೆ ಎಂದು ಚಡಪಡಿಸುತ್ತಿತ್ತು ಈ
ಮುದ್ದು ಮನಸ್ಸು. ದಿನಾಗಲೂ ಎದುರು ಬಂದರೂ ನೀ ನನಗೆ ನೀಡುತ್ತಿದ್ದ ಆ ಮುದ್ದಾದ
ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ಆ ದಿನಗಳಲ್ಲಿ ನಮ್ಮಿಬರಲ್ಲಿ ಇರಿಸು
ಮುರಿಸು ಬಂದದ್ದೇ ಈ ಪ್ರೀತಿ ಬೆಳೆಯಲು ಕಾರಣವಾಯಿತು. ದಿನಗಳೆದಂತೆ ನೀ ನನ್ನವನಾದೆ.
ನಾ ನಿನ್ನ ಮನದ ಒಡತಿಯಾಗಲೇ ಎಂದಾಗ ನೀನಿತ್ತ ಉತ್ತರ ನನಗೀಗಲೂ ನೆನಪಿದೆ..

ಸತ್ಯ ನಿಷ್ಠೆಯ ನಿನ್ನೀ ಬಾಳು ನಿಜವಾಗಲೂ ಸಾರ್ಥಕ. ನಿನಗಿದ್ದ ಜವಾಬ್ದಾರಿಗಳೋ ಇಂದು
ನಮ್ಮಿಬ್ಬರನ್ನೂ ದೂರಕೆ ಸರಿಸುತಲಿದೆ.

ನೀ ನನ್ನ ಮೇಲಿಟ್ಟ ಪ್ರೀತಿ, ಅಭಿಮಾನ, ಗೌರವ ಗಂಗೆಯಷ್ಟೇ ಪವಿತ್ರವಾದುದು. ಎಷ್ಟೋ
ಬಾರಿ ನಿನ್ನ ನಗು ನೋಡುತ್ತಲೇ ನಾ ಮೈಮರೆಯುತ್ತಿದ್ದೆ. ನಿನ್ನ ತೋಳ ತೆಕ್ಕೆಗಳಲ್ಲಿ ನಾ
ಗುಬ್ಬಿಮರಿಯಂತೆ ಅವಿತುಕೊಂಡು ಇಡೀ ಪ್ರಪಂಚದ ಸುಖವನ್ನೆಲ್ಲಾ ಆ ಆಲಿಂಗನದಲ್ಲಿ ನಾ
ಕಂಡೆ. ಈಗಲೂ ನೆನಪಿದೆ ಆ ನಿನ್ನ ಕಣ್ಣುಗಳು ನನ್ನ ಹೇಗೆ ಕೆಣಕುತ್ತಿತ್ತು ಎಂದು..ಅದು
ಈಗಲೂ ಕೆಣಕುತ್ತಿದೆ ನನ್ನನು…..

ತಂಗಾಳಿಯಂತೆ ನಿನ್ನ ಪ್ರೇಮ. ಒಮ್ಮೆಗೇ ಹಾರಿ ಬಂದು ನನ್ನ ಮಡಿಲಲ್ಲಿ ಸೇರುತ್ತಿದ್ದ
ನಿನ್ನ ಮೊಗ ನಿಜವಾಗಲೂ ಆ ಪೂರ್ಣ ಚಂದಿರನಂತೆ ಹೊಳೆಯುತ್ತಿತ್ತು. ರೋಮಾಂಚನ
ಮಾಡುತ್ತಿತ್ತು. ನಿನ್ನ ನಡೆ -ನುಡಿ ಮುತ್ತಿನಂತದ್ದು. ನಿನ್ನ ಹೃದಯ ಅಮೃತಧಾರೆ.ಆ
ದೇವರು ನಿನಗೆ ಕಷ್ಟ ನೀಡಿ ನಿನ್ನ ಮೊಗದಲ್ಲೆಲ್ಲೋ ಮೂಲೆಯಲ್ಲಿ ದುಃಖದ ಛಾಯೆಯ
ಅಡಗಿಸಿದ್ದರು, ಅದನ್ನು ನಾ ಕಂಡೂ ಏನೂ ಮಾಡಲಾಗದೆ ಮೌನಿಯಾದೆ. ಇದೆ ನನ್ನ ಸದಾ
ಹಿಂಸಿಸಿದ್ದು ಸಹಾ…

ನನ್ನ ಮಡಿಲಿಗೆ ತುಂಬಿ ಒಂದು ಹನಿ ಕಣ್ಣೀರು ಸಹ ನನ್ನ ಗಲ್ಲದ ಮೇಲೆ ಬೀಳದಂತೆ
ನೋಡಿಕೊಂಡು, ಸಾಗರದಂತಹ ನಿನ್ನ ಪ್ರೀತಿಯ ನನ್ನ ಮೇಲೆ ಹರಿಸಿ, ಧೈರ್ಯ,
ಆತ್ಮವಿಶ್ವಾಸಗಳನ್ನು ನನ್ನ ಎದೆಗೆ ಅಪ್ಪಳಿಸುವಂತೆ ಮಾಡಿ, ಜೀವನದ ಏರಿಳಿತಗಳ ಬಗ್ಗೆ
ಅರಿಯುವಂತೆ ಹೇಳಿ, ನಿನ್ನ ಮುಗ್ಧತೆಯ ಒಲವಲ್ಲಿ
ನನ್ನ ಕರಗುವಂತೆ ಮಾಡಿದ ನನ್ನ ಸರ್ವಸ್ವವೂ ನೀನೆ ನೀನೇನೆ….!!!

ನಮ್ಮಿಬ್ಬರ ಒಲವು ಸಂಗಮವಾಗಿ ಅದು ಭೋರ್ಗರೆಯಲ್ಲೂ ತೊಡಗಿತು. ಬರೀ ನೀ ನನ್ನ ಒಳವಾಗದೆ
ಬಾಳ ಸಖನಾದೆ,ಧೈರ್ಯ ತುಂಬುವ ಗೆಳೆಯನಾದೆ, ಸರಿ ದಾರೀಲಿ ನಡೆಸುವ ತಂದೆಯಾದೆ.
ಆಕಾಶದೆತ್ತರದ ನಿನ್ನ ಅಮೂಲ್ಯವಾದ ಅನನ್ಯವಾದ ಪ್ರೀತಿ ನೀಡಿ ನನ್ನ ಅರ್ದಾಂಗಿಯಾದೆ…

ಆದರೇನು ಮಾಡುವುದು ಎಲ್ಲ ವಿಧಿಬರಹ..ಅನ್ದಾಗಿತ್ತು ನಮ್ಮ ಮನಸ್ಸು-ಹೃದಯಗಳ ಮದುವೆ ಈ
ಹೃದಯದಂಗಳದಲಿ, ಆದರೆ ಇದನ್ನು ಸಮಾಜ ಒಪ್ಪಿತೇ? ಹಾಗಾಗಿ ಇಂದು ನಾ ನಿನಗಾಗಿಯೇ
ಕಾಯುತಿರುವೆನು, ಆ ಮರಗಿಡಗಳ ನಡುವೆ ಹೂವನಿಡಿದು, ಪ್ರೀತಿಯ ಹೂಗೊಂಚಲ ಹೊತ್ತು,
ಆದರೇನು ಮಾಡುವುದು ಇಂದು ನಿನ್ನ ಮದುವೆ!ನನ್ನೊಡನೆ ಅಲ್ಲ …ಬೇರೆಯ ಹೆಣ್ಣಿನೊಂದಿಗೆ !
ನೋಯುತ್ತಿದೆ ಮನಸ್ಸು ಕಾಯುತ್ತಿದೆ ಹೃದಯ ನೀ ಎಂದು ಮತ್ತೆ ಬಂದು ನನ್ನ ಹೃದಯದ ಬಾಗಿಲ
ತಟ್ಟುವೆ ಎಂದು ….?

ನೀ ಏನಾದರೂ ಆ ದಾರೀಲಿ ಮತ್ತೆ ಬಂದರೆ ಮರೆಯದೆ ನೋಡು ನಾನಲ್ಲಿ ನಿನಗಾಗಿ ಬಿಟ್ಟು
ಹೋಗಿರುತ್ತೇನೆ ನನ್ನ ಹೃದಯವನ್ನು. ಸಿಕ್ಕರೆ ಮರೆಯದೆ ಅದನ್ನು ಎತ್ತಿಕೊಂಡು ಹೋಗು,
ನನ್ನ ಹಾಲಿನಂತಹ ಪ್ರೀತಿಯ ತೊಯ್ದು ಎರಕವ ಹೊಯ್ದು ನೀನದನ್ನು ಸ್ವೀಕರಿಸು. ಈಗಲೂ ಒಂದು
ಕತ್ತಲೆ ಕೋಣೆಯಲ್ಲಿ ಬೆಳಕನ್ನು ಬಾರದಂತೆ ಮಾಡಿ ಅಳುತ ಕುಳಿತಿರುವೆ ಒಂದು
ಮೂಲೆಯಲ್ಲಿ…

-ನಿನಗಾಗಿ ಕಾದಿರುವ ????????????


Sunday, September 20, 2009

ಸ್ವಪ್ನದಲ್ಲಿ ಬಂದು ಮರವೊಂದು ಮಾತನಾಡಿದಾಗ!


ಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.
* ರೂಪಾ ಎಸ್

ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ ದೇವತೆಗಳು ವಾಸಿಸುತ್ತಾರೆ ಎನ್ನುವ ದಟ್ಟವಾದ ನಂಬಿಕೆ ಜನರಲ್ಲಿ ಬೇರೂರಿದೆ. ಆದ್ದರಿಂದಲೇ ಅವುಗಳನ್ನು ಕಡಿಯುತ್ತಿರಲಿಲ್ಲ. ಅರಳಿ ಮತ್ತು ಬೇವಿನ ಸಂಗಮದ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಮಾಡಿದರೆ ಅನೇಕ ಇಷ್ಟಾರ್ಥಗಳ ಸಿದ್ದಿಸುತ್ತವೆ ಎಂಬುದು ಆಸ್ತಿಕರ ನಂಬುಗೆ. ತೆಂಗಿನ ಮರವಂತೂ ಕಲ್ಪವೃಕ್ಷವೆಂದೇ ಭಕ್ತರ ಮನದಲ್ಲಿ ಸ್ಥಾಯಿಯಾಗಿದೆ.
ಈ ಎಲ್ಲಾ ನಂಬಿಕೆಗಳೂ ವೃಕ್ಷಸಂಪತ್ತನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಜಡವಸ್ತುಗಳಲ್ಲೂ ವಿಶ್ವಾಸದ ಉಪಸ್ಥಿತಿಯನ್ನು ಕಂಡ ನಮ್ಮ ಸಂಸ್ಕ್ರತಿಯಲ್ಲಿ ಮರಗಳು ಪೂಜಾರ್ಹವಾದುದಲ್ಲಿ ಆಶ್ಚರ್ಯವೇನಿಲ್ಲ. ಇಂದ್ರೀಯ ಗೋಚರವಾದ ಪ್ರಪಂಚದಲ್ಲಿ ಇಂದ್ರೀಯಾತೀತ ಚೇತನದ ಅಸ್ತಿತ್ವವನ್ನು ಕಂಡವರು ಭಾರತೀಯರೇ. ಆದುದರಿಂದಲೇ ಪ್ರಕೃತಿಯಡನೆಯೂ ಇತರ ಜೀವಿಗಳೊಡನೆಯೂ ಸಾಮರಸ್ಯದಿಂದ ನಮಗೆ ಬಾಳಲು ಸಾದ್ಯವಾಯಿತು.
ಈ ಮೇಲಿನ ಸಿದ್ದಾಂತಗಳ ಹಿನ್ನೆಲೆಯಲ್ಲಿ ನಮ್ಮ ಹಳ್ಳಿಯಲ್ಲಿ ಹಿಂದೆ ಸಂಭವಿಸಿದ ಒಂದು ಅಲೌಕಿಕವೆನ್ನಿಸಬಹುದಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಈ ಘಟನೆ ಭಾವಜೀವಿಯಾದ ಮನುಷ್ಯನಿಗೂ ಮರಕ್ಕೂ ಇರುವ ಭಾವನಾತ್ಮಕ ಸಂಬಂಧವನ್ನು ಸಾಕ್ಷೀಕರಿಸಿದೆ.
Can a tree speak with a man? Why not!
ನಮ್ಮೂರಾದ ಮೈಸೂರು ಗ್ರಾಮದಲ್ಲಿ ನಮ್ಮ ತೋಟದಲ್ಲಿ ಬೆಳಗಿ ಮರವೆಂಬ ಮಾವಿನ ಮರವೊಂದಿತ್ತು. ಅದಕ್ಕೆ ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿತ್ತು ಎಂದು ಎಲ್ಲರೂ ಹೇಳುತ್ತಿದ್ದರು. ಆ ಮರದ ಬುಡವೇ ಐದಾರು ಜನ ನಿಂತು ಕೈಗಳನ್ನು ಚಾಚಿದರೂ ಹಿಡಿಯಲಾರದಷ್ಟು ದೊಡ್ಡದು. ಅದರ ಅನೇಕ ಬೃಹತ್ ಶಾಖೆಗಳು ಹಿಂದೆಯೇ ಬಿದ್ದು ಹೋಗಿ ಒಂದೇ ಒಂದು ದೊಡ್ಡ ಶಾಖೆ ಮಾತ್ರ ಉಳಿದುಕೊಂಡಿತ್ತು. ಆಕಾಶವನ್ನು ಅಳೆಯಲು ಕೈಚಾಚಿದಂತಿದ್ದ ಆ ಕೊಂಬೆಯಲ್ಲೇ ಶಾಖೋಪಶಾಖೆಗಳಿದ್ದು ಅವುಗಳಲ್ಲಿ ಪ್ರತಿವರ್ಷವೂ ಹಣ್ಣುಗಳು ಬಿಡುತಿದ್ದವು. ಆ ಹಣ್ಣುಗಳು ಇತರ ಮಾವಿನ ಹಣ್ಣುಗಳಂತಿರದೆ ಬಿಳಿಯ ಬಣ್ಣದಾಗಿತ್ತು. ಅದರಿಂದಲೇ ಆ ಮರಕ್ಕೆ ಬೆಳಗಿ ಎಂಬ ಹೆಸರು ಬಂದಿತ್ತು.
ಆ ಮರದ ಒಂದು ವೈಚಿತ್ರ್ಯವೆಂದರೆ ಅದರ ಬುಡವನ್ನು ಕುಡುಗೋಲಿನಿಂದ ಗೀರಿದಾಗ ಒಳಗಿಂದ ಬೆಳ್ಳಗಿನ ಹಾಲು ಬರುತಿತ್ತು ಮತ್ತು ಹಾಗೆಯೇ ನೋವಿನ ಚೀತ್ಕಾರದಂತೆ ಕೇಳಿಸುವ ಒಂದು ದನಿ ಕೇಳಿಸುತಿತ್ತು. ಇದನ್ನು ಒಮ್ಮೆ ನನಗೆ ಕೇಳಿಸಿ ತೋರಿಸಿ ನಮ್ಮ ತಾತನವರು ಮರ ನೋವಿನಿಂದ ಚೀರುತ್ತದೆ ಅದಕ್ಕೆ ಕುಡುಗೋಲು ಕೊಡಲಿಗಳನ್ನು ತಗಲಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು.
ಆ ಮರದ ಬಗ್ಗೆ ಕಥೆಯೊಂದು ಪ್ರಚಲಿತವಿತ್ತು. ಮಾವಿನ ಹಣ್ಣಿನಋತುವಿನಲ್ಲಿ ಪ್ರತಿವರ್ಷವೂ ಮರದಿಂದ ಹಣ್ಣುಗಳು ಕೆಳಗೆ ಉದುರುತಿದ್ವು. ಅವುಗಳನ್ನು ತಿನ್ನಲು ಆನೆಯೊಂದು ಪಕ್ಕದ ಕಾಡಿನಿಂದ ಬಂದು ಹಣ್ಣುಗಳನ್ನು ತಿಂದು ಹೋಗುತ್ತಿತ್ತಂತೆ. ಆ ಆನೆ ಬೇರೆ ಮಾವಿನ ಮರಗಳ ಬಳಿಗೆ ಹೋಗುತ್ತಲೇ ಇರಲಿಲ್ಲವಂತೆ. ನಮ್ಮ ತಾತನವರಿಗೆ ಆ ಮರದ ಬಗ್ಗೆ ಒಂದು ರೀತಿಯ ವಿಶೇಷ ಗೌರವ, ವಿಶ್ವಾಸಗಳಿದ್ದವು. ಅವರು ನಿತ್ಯವೂ ಅದರ ಬಳಿ ಹೋಗಿ ನಿಂತು ನೋಡಿ ವೃದ್ದಾಪದಲ್ಲಿರುವ ಹಿರಿಯ ಬಂದುವೊಬ್ಬರನ್ನು ನೋಡಿ ಬರುವಂತೆ ನೋಡಿಕೊಂಡು ಬರುತಿದ್ದರು. ನನಗೆ ಇದೆಲ್ಲ ವಿಚಿತ್ರವಾಗಿ, ಅಲೌಕಿಕವಾಗಿ ತೋರುತಿತ್ತು.
ಮಳೆಗಾಲದ ಒಂದು ದಿನ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ನನ್ನನ್ನು ಇದ್ದಕ್ಕಿದ್ದಂತೆ ನನ್ನ ತಾತ ಬಂದು ಎಬ್ಬಿಸಿ 'ಬಾ ತೋಟಕ್ಕೆ ಹೋಗಿ ಬರಬೇಕು' ಎಂದರು. ಅವರ ಮುಖದಲ್ಲಿ ವಿಚಿತ್ರವಾದ ಭಾವನೆಗಳಿದ್ದವು, ಯಾವುದೋ ವಿಷಯವನ್ನು ಹೇಳಲು ಸಂಕೋಚಪಟ್ಟು ಕೊಂಡಂತೆ ತೋರಿತು, ನಾನು ಹಾಸಿಗೆ ಬಿಟ್ಟೆದ್ದು ಹಲ್ಲು ಉಜ್ಜಿಕೊಂಡು ಹಿಂದೆ ಹೊರಟೆ. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ನೆಲವು ನೆನೆದು ಹುಲ್ಲಿನ ಗರಿಕೆಗಳ ಮೇಲೆ ನೀರಿನ ಹನಿಗಳು ಮುತ್ತು ಮುತ್ತಾಗಿ ನಿಂತಿದ್ದವು. ಶೀತ ಗಾಳಿಯ ಚಳಿಯು ಮೈಯನ್ನು ನಡುಗಿಸುತಿತ್ತು. ನಾವು ಮಾವಿನ ಮರಗಳ ನಡುವೆ ಹೋದಾಗ ಗಾಳಿಯಿಂದ ಅಲುಗಾಡುವ ಎಲೆಗಳಿಂದ ಉದುರಿದ ನೀರಿನ ಹನಿಗಳು ಮೈನಡುಕವನ್ನು ಇನ್ನಷ್ಟು ಹೆಚ್ಚಿಸುತಿದ್ದವು. ಆದರೂ ಆ ಮಾವಿನ ಹೂ ಕಾಯಿಗಳ ಸುಗಂಧ, ಮಣ್ಣಿನ ವಾಸನೆ, ಇವೆಲ್ಲ ಸೇರಿ ವಾತಾವರಣವನ್ನು ಅಪ್ಯಾಯಮಾನವಾಗಿಸಿದ್ದವು.
ನಮ್ಮ ತಾತ ಬೆಳಗಿ ಮರದ ಬಳಿಗೆ ಹೋಗಿ ನಿಂತರು. ನಾನೂ ಅವರ ಪಕ್ಕದಲ್ಲಿ ನಿಂತೆ? ಅವರು ಬೆಳಗಿ ಮರವನ್ನು ಒಮ್ಮೆ ನೋಡಿ ಒಂದು ರೀತಿಯ ಸಂಕೋಚದ ಮುಖ ಮಾಡಿಕೊಂಡು ಹೇಳಿದರು. ಈ ಬೆಳಿಗ್ಗೆ ಒಂದು ವಿಚಿತ್ರವಾದ ಸ್ವಪ್ನವಾಯಿತು. ಅದರಲ್ಲಿ ಈ ಬೆಳಗಿ ಮರ ಬಂದು ನಾನು ಈ ಬೆಳಿಗ್ಗೆ ಬಿದ್ದು ಹೋಗುತ್ತೇನೆ ಎಂದು ಹೇಳಿದ ಹಾಗಾಯಿತು. ಇದು ಭ್ರಮೆಯಿರಬಹುದುದೇನೋ ಆದರೂ ಮನಸ್ಸು ತಡೆಯಲಿಲ್ಲ ಬಂದು ಬಿಟ್ಟೆ ಎಂದರು.
ಅವರ ಸ್ವಪ್ನದಲ್ಲಿ ಪ್ರಾಯಶಃ ಅವರಿಗೆ ಸಂಪೂರ್ಣವಾಗಿ ನಂಬಿಕೆ ಇರಲಿಲ್ಲವೆಂದು ನನಗೆ ತೋರಿತು. ಆದರೂ ಸ್ವಪ್ನವನ್ನು ಸಂಪೂರ್ಣ ತಳ್ಳಿಹಾಕದೆ ಅಲ್ಲಿಗೆ ಬಂದಿದ್ದರು. ತನ್ನ ನಂಬಿಕೆಗೆ ಪುಷ್ಟಿಬೇಕೆಂಬಂತೆ ನನ್ನನ್ನೂ ಕರೆದುಕೊಂಡು ಬಂದಿದ್ದರು. ಒಂದೆರಡು ನಿಮಿಷಗಳು ನಾವಿಬ್ಬರೂ ಮೌನವಾಗಿ ಮರದ ಮುಂದೆ ನಿಂತೆವು. ಆಗ ವಿಲಕ್ಷಣವಾದ ಘಟನೆ ನಡೆದು ಹೋಯಿತು. ಒಮ್ಮೆ ಗಾಳಿ ಜೋರಾಗಿ ಬೀಸಿತು. ಮರುಕ್ಷಣವೇ ನೋಡನೋಡುತ್ತಿದ್ದಂತೆ ಲಟಪಟನೆಂದು ಬೆಳಗಿ ಮರದಲ್ಲಿ ಉಳಿದಿದ್ದ ಅದರ ದೈತ್ಯಗಾತ್ರದ ಶಾಖೆ ಮುರಿದು ನಿಧಾನವಾಗಿ ನೆಲಕ್ಕೆ ಬಿದು ಒಮ್ಮೆ ಅದುರಿ ನಿಶ್ಯಬ್ದವಾಗಿ ಹೋಯಿತು.
ನಾನು ಅವಕ್ಕಾಗಿ ನಿಂತು ಹೋದೆ ನನ್ನ ತಾತ ಒಂದು ಕ್ಷಣ ಮರದ ಬಳಿಗೆ ಸರಸರನೆ ಹೋಗಿ ಬಿದಿದ್ದ ಕೊಂಬೆಯನ್ನು ಕೈಯಿಂದ ಸವರಿದರು. ಅವರ ಕಣ್ಣಿನಿಂದ ಉದುರಿದ ಹನಿಗಳು ಬಿದ್ದು ಹೋದ ಕೊಂಬೆಗೆ ಬಾಷ್ಪಾಭಿಷೇಕ ಮಾಡಿದವು. ಆ ಸ್ವಪ್ನದ ಅರ್ಥ ಏನು? ಸ್ವಪ್ನದಲ್ಲಿ ಮರವು ಬಂದು ಹೇಳೀದಂತೆಯೇ ಪ್ರತ್ಯಕ್ಷ್ಯ ನಡೆದು ಹೋಯಿತಲ್ಲಾ? ಮರದ ಆತ್ಮವೇ ಮನುಷ್ಯನ ಮನಸ್ಸಿನೊಡನೆ ಸಂಪರ್ಕಗೊಂಡು ಈ ಅಲೌಕಿಕ ಘಟನೆ ಜರುಗಿತೋ? ಅಥವಾ ಸ್ವಪ್ನದಲ್ಲಿ ಹೇಳಿದಂತೆಯೇ ಜರುಗಿದ್ದು ಕೇವಲ ಕಾಕತಾಳೀಯವೋ? ವ್ಯಾಖ್ಯಾನಿಸುವುದು ಕಷ್ಟ. ಅದೇನೇ ಇದ್ದರೂ ಮನುಷ್ಯನಿಗೆ ಆತನ ಕಣ್ಮುಂದೇಯೇ ಇರುವ, ಚಿಕ್ಕಂದಿನಿಂದ ನೋಡಿದ, ಪ್ರೀತಿಸಿದ, ದೈವಸ್ವರೂಪಿಯೆಂದು ಬಗೆದ ಮರದೊಡನೆ ಭಾವಾತ್ಮಕ ಸಂಬಂಧವಿರಿವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಈ ಘಟನೆಯ ಬಗ್ಗೆ ಮನಶಾಸ್ತ್ರದಲ್ಲಿ ಅಥವಾ ವೈಜ್ಞಾನಿಕವಾಗಿ ವಿವರಣೆ ಏನೇ ಇರಲಿ, ಈ ಘಟನೆಯನ್ನು ನೆನೆಸಿದಾಗ ನನ್ನ ಮೈ ಇಂದೂ ರೋಮಾಂಚನಗೊಳ್ಳುತ್ತದೆ. ಸ್ವಪ್ನದಲ್ಲಿ ಬಂದಂತೆಯೇ ಎದುರಿಗೆ ನಡೆದುಬಿಟ್ಟಿದ್ದರಿಂದ ಮುಂದಾಗುವುದನ್ನು ಮನಸ್ಸು ಕಂಡುಕೊಳ್ಳಬಲ್ಲದೇನೋ ಎನ್ನಿಸುತ್ತದೆ. ಮನುಷ್ಯನಿಗೆ ತಿಳಿಯದ ನಿಗೂಡ ರಹಸ್ಯಗಳು ವಿಶ್ವದಲ್ಲಿ ನಮ್ಮ ಸುತ್ತಲೇ ಸುಳಿದಾಡುತ್ತಿವೆ ಎಂಬಂತೆ ಭಾಸವಾಗುತ್ತದೆ.
ಮೇಲಿನ ಘಟನೆಯ ನಿಗೂಢತೆಯನ್ನು ಬಿಟ್ಟು ಅದರಲ್ಲಿರುವ ಮನುಷ್ಯ ಹಾಗೂ ಪ್ರಕೃತಿಯ ಭಾವಾತ್ಮಕ ಸಂಬಂಧವನ್ನು ನೋಡಿದಾಗ, ಪ್ರತಿಯೊಬ್ಬ ಮನುಷ್ಯನೂ ತನ್ನ ಸುತ್ತ ಇರುವ ಪ್ರಕೃತಿಯಡನೆ ಆ ರೀತಿಯ ಸಂಬಂಧವನ್ನು ಇಟ್ಟುಕೊಳ್ಳುವುದಾದರೆ ನಮ್ಮ ಪರಿಸರಕ್ಕೆ ಅದೆಷ್ಟು ಕ್ಷೇಮ ಎನ್ನಿಸುದೆಲ್ಲವೇ.