Sunday, September 20, 2009

ಸ್ವಪ್ನದಲ್ಲಿ ಬಂದು ಮರವೊಂದು ಮಾತನಾಡಿದಾಗ!


ಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.
* ರೂಪಾ ಎಸ್

ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ ದೇವತೆಗಳು ವಾಸಿಸುತ್ತಾರೆ ಎನ್ನುವ ದಟ್ಟವಾದ ನಂಬಿಕೆ ಜನರಲ್ಲಿ ಬೇರೂರಿದೆ. ಆದ್ದರಿಂದಲೇ ಅವುಗಳನ್ನು ಕಡಿಯುತ್ತಿರಲಿಲ್ಲ. ಅರಳಿ ಮತ್ತು ಬೇವಿನ ಸಂಗಮದ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಮಾಡಿದರೆ ಅನೇಕ ಇಷ್ಟಾರ್ಥಗಳ ಸಿದ್ದಿಸುತ್ತವೆ ಎಂಬುದು ಆಸ್ತಿಕರ ನಂಬುಗೆ. ತೆಂಗಿನ ಮರವಂತೂ ಕಲ್ಪವೃಕ್ಷವೆಂದೇ ಭಕ್ತರ ಮನದಲ್ಲಿ ಸ್ಥಾಯಿಯಾಗಿದೆ.
ಈ ಎಲ್ಲಾ ನಂಬಿಕೆಗಳೂ ವೃಕ್ಷಸಂಪತ್ತನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಜಡವಸ್ತುಗಳಲ್ಲೂ ವಿಶ್ವಾಸದ ಉಪಸ್ಥಿತಿಯನ್ನು ಕಂಡ ನಮ್ಮ ಸಂಸ್ಕ್ರತಿಯಲ್ಲಿ ಮರಗಳು ಪೂಜಾರ್ಹವಾದುದಲ್ಲಿ ಆಶ್ಚರ್ಯವೇನಿಲ್ಲ. ಇಂದ್ರೀಯ ಗೋಚರವಾದ ಪ್ರಪಂಚದಲ್ಲಿ ಇಂದ್ರೀಯಾತೀತ ಚೇತನದ ಅಸ್ತಿತ್ವವನ್ನು ಕಂಡವರು ಭಾರತೀಯರೇ. ಆದುದರಿಂದಲೇ ಪ್ರಕೃತಿಯಡನೆಯೂ ಇತರ ಜೀವಿಗಳೊಡನೆಯೂ ಸಾಮರಸ್ಯದಿಂದ ನಮಗೆ ಬಾಳಲು ಸಾದ್ಯವಾಯಿತು.
ಈ ಮೇಲಿನ ಸಿದ್ದಾಂತಗಳ ಹಿನ್ನೆಲೆಯಲ್ಲಿ ನಮ್ಮ ಹಳ್ಳಿಯಲ್ಲಿ ಹಿಂದೆ ಸಂಭವಿಸಿದ ಒಂದು ಅಲೌಕಿಕವೆನ್ನಿಸಬಹುದಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಈ ಘಟನೆ ಭಾವಜೀವಿಯಾದ ಮನುಷ್ಯನಿಗೂ ಮರಕ್ಕೂ ಇರುವ ಭಾವನಾತ್ಮಕ ಸಂಬಂಧವನ್ನು ಸಾಕ್ಷೀಕರಿಸಿದೆ.
Can a tree speak with a man? Why not!
ನಮ್ಮೂರಾದ ಮೈಸೂರು ಗ್ರಾಮದಲ್ಲಿ ನಮ್ಮ ತೋಟದಲ್ಲಿ ಬೆಳಗಿ ಮರವೆಂಬ ಮಾವಿನ ಮರವೊಂದಿತ್ತು. ಅದಕ್ಕೆ ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿತ್ತು ಎಂದು ಎಲ್ಲರೂ ಹೇಳುತ್ತಿದ್ದರು. ಆ ಮರದ ಬುಡವೇ ಐದಾರು ಜನ ನಿಂತು ಕೈಗಳನ್ನು ಚಾಚಿದರೂ ಹಿಡಿಯಲಾರದಷ್ಟು ದೊಡ್ಡದು. ಅದರ ಅನೇಕ ಬೃಹತ್ ಶಾಖೆಗಳು ಹಿಂದೆಯೇ ಬಿದ್ದು ಹೋಗಿ ಒಂದೇ ಒಂದು ದೊಡ್ಡ ಶಾಖೆ ಮಾತ್ರ ಉಳಿದುಕೊಂಡಿತ್ತು. ಆಕಾಶವನ್ನು ಅಳೆಯಲು ಕೈಚಾಚಿದಂತಿದ್ದ ಆ ಕೊಂಬೆಯಲ್ಲೇ ಶಾಖೋಪಶಾಖೆಗಳಿದ್ದು ಅವುಗಳಲ್ಲಿ ಪ್ರತಿವರ್ಷವೂ ಹಣ್ಣುಗಳು ಬಿಡುತಿದ್ದವು. ಆ ಹಣ್ಣುಗಳು ಇತರ ಮಾವಿನ ಹಣ್ಣುಗಳಂತಿರದೆ ಬಿಳಿಯ ಬಣ್ಣದಾಗಿತ್ತು. ಅದರಿಂದಲೇ ಆ ಮರಕ್ಕೆ ಬೆಳಗಿ ಎಂಬ ಹೆಸರು ಬಂದಿತ್ತು.
ಆ ಮರದ ಒಂದು ವೈಚಿತ್ರ್ಯವೆಂದರೆ ಅದರ ಬುಡವನ್ನು ಕುಡುಗೋಲಿನಿಂದ ಗೀರಿದಾಗ ಒಳಗಿಂದ ಬೆಳ್ಳಗಿನ ಹಾಲು ಬರುತಿತ್ತು ಮತ್ತು ಹಾಗೆಯೇ ನೋವಿನ ಚೀತ್ಕಾರದಂತೆ ಕೇಳಿಸುವ ಒಂದು ದನಿ ಕೇಳಿಸುತಿತ್ತು. ಇದನ್ನು ಒಮ್ಮೆ ನನಗೆ ಕೇಳಿಸಿ ತೋರಿಸಿ ನಮ್ಮ ತಾತನವರು ಮರ ನೋವಿನಿಂದ ಚೀರುತ್ತದೆ ಅದಕ್ಕೆ ಕುಡುಗೋಲು ಕೊಡಲಿಗಳನ್ನು ತಗಲಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು.
ಆ ಮರದ ಬಗ್ಗೆ ಕಥೆಯೊಂದು ಪ್ರಚಲಿತವಿತ್ತು. ಮಾವಿನ ಹಣ್ಣಿನಋತುವಿನಲ್ಲಿ ಪ್ರತಿವರ್ಷವೂ ಮರದಿಂದ ಹಣ್ಣುಗಳು ಕೆಳಗೆ ಉದುರುತಿದ್ವು. ಅವುಗಳನ್ನು ತಿನ್ನಲು ಆನೆಯೊಂದು ಪಕ್ಕದ ಕಾಡಿನಿಂದ ಬಂದು ಹಣ್ಣುಗಳನ್ನು ತಿಂದು ಹೋಗುತ್ತಿತ್ತಂತೆ. ಆ ಆನೆ ಬೇರೆ ಮಾವಿನ ಮರಗಳ ಬಳಿಗೆ ಹೋಗುತ್ತಲೇ ಇರಲಿಲ್ಲವಂತೆ. ನಮ್ಮ ತಾತನವರಿಗೆ ಆ ಮರದ ಬಗ್ಗೆ ಒಂದು ರೀತಿಯ ವಿಶೇಷ ಗೌರವ, ವಿಶ್ವಾಸಗಳಿದ್ದವು. ಅವರು ನಿತ್ಯವೂ ಅದರ ಬಳಿ ಹೋಗಿ ನಿಂತು ನೋಡಿ ವೃದ್ದಾಪದಲ್ಲಿರುವ ಹಿರಿಯ ಬಂದುವೊಬ್ಬರನ್ನು ನೋಡಿ ಬರುವಂತೆ ನೋಡಿಕೊಂಡು ಬರುತಿದ್ದರು. ನನಗೆ ಇದೆಲ್ಲ ವಿಚಿತ್ರವಾಗಿ, ಅಲೌಕಿಕವಾಗಿ ತೋರುತಿತ್ತು.
ಮಳೆಗಾಲದ ಒಂದು ದಿನ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ನನ್ನನ್ನು ಇದ್ದಕ್ಕಿದ್ದಂತೆ ನನ್ನ ತಾತ ಬಂದು ಎಬ್ಬಿಸಿ 'ಬಾ ತೋಟಕ್ಕೆ ಹೋಗಿ ಬರಬೇಕು' ಎಂದರು. ಅವರ ಮುಖದಲ್ಲಿ ವಿಚಿತ್ರವಾದ ಭಾವನೆಗಳಿದ್ದವು, ಯಾವುದೋ ವಿಷಯವನ್ನು ಹೇಳಲು ಸಂಕೋಚಪಟ್ಟು ಕೊಂಡಂತೆ ತೋರಿತು, ನಾನು ಹಾಸಿಗೆ ಬಿಟ್ಟೆದ್ದು ಹಲ್ಲು ಉಜ್ಜಿಕೊಂಡು ಹಿಂದೆ ಹೊರಟೆ. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ನೆಲವು ನೆನೆದು ಹುಲ್ಲಿನ ಗರಿಕೆಗಳ ಮೇಲೆ ನೀರಿನ ಹನಿಗಳು ಮುತ್ತು ಮುತ್ತಾಗಿ ನಿಂತಿದ್ದವು. ಶೀತ ಗಾಳಿಯ ಚಳಿಯು ಮೈಯನ್ನು ನಡುಗಿಸುತಿತ್ತು. ನಾವು ಮಾವಿನ ಮರಗಳ ನಡುವೆ ಹೋದಾಗ ಗಾಳಿಯಿಂದ ಅಲುಗಾಡುವ ಎಲೆಗಳಿಂದ ಉದುರಿದ ನೀರಿನ ಹನಿಗಳು ಮೈನಡುಕವನ್ನು ಇನ್ನಷ್ಟು ಹೆಚ್ಚಿಸುತಿದ್ದವು. ಆದರೂ ಆ ಮಾವಿನ ಹೂ ಕಾಯಿಗಳ ಸುಗಂಧ, ಮಣ್ಣಿನ ವಾಸನೆ, ಇವೆಲ್ಲ ಸೇರಿ ವಾತಾವರಣವನ್ನು ಅಪ್ಯಾಯಮಾನವಾಗಿಸಿದ್ದವು.
ನಮ್ಮ ತಾತ ಬೆಳಗಿ ಮರದ ಬಳಿಗೆ ಹೋಗಿ ನಿಂತರು. ನಾನೂ ಅವರ ಪಕ್ಕದಲ್ಲಿ ನಿಂತೆ? ಅವರು ಬೆಳಗಿ ಮರವನ್ನು ಒಮ್ಮೆ ನೋಡಿ ಒಂದು ರೀತಿಯ ಸಂಕೋಚದ ಮುಖ ಮಾಡಿಕೊಂಡು ಹೇಳಿದರು. ಈ ಬೆಳಿಗ್ಗೆ ಒಂದು ವಿಚಿತ್ರವಾದ ಸ್ವಪ್ನವಾಯಿತು. ಅದರಲ್ಲಿ ಈ ಬೆಳಗಿ ಮರ ಬಂದು ನಾನು ಈ ಬೆಳಿಗ್ಗೆ ಬಿದ್ದು ಹೋಗುತ್ತೇನೆ ಎಂದು ಹೇಳಿದ ಹಾಗಾಯಿತು. ಇದು ಭ್ರಮೆಯಿರಬಹುದುದೇನೋ ಆದರೂ ಮನಸ್ಸು ತಡೆಯಲಿಲ್ಲ ಬಂದು ಬಿಟ್ಟೆ ಎಂದರು.
ಅವರ ಸ್ವಪ್ನದಲ್ಲಿ ಪ್ರಾಯಶಃ ಅವರಿಗೆ ಸಂಪೂರ್ಣವಾಗಿ ನಂಬಿಕೆ ಇರಲಿಲ್ಲವೆಂದು ನನಗೆ ತೋರಿತು. ಆದರೂ ಸ್ವಪ್ನವನ್ನು ಸಂಪೂರ್ಣ ತಳ್ಳಿಹಾಕದೆ ಅಲ್ಲಿಗೆ ಬಂದಿದ್ದರು. ತನ್ನ ನಂಬಿಕೆಗೆ ಪುಷ್ಟಿಬೇಕೆಂಬಂತೆ ನನ್ನನ್ನೂ ಕರೆದುಕೊಂಡು ಬಂದಿದ್ದರು. ಒಂದೆರಡು ನಿಮಿಷಗಳು ನಾವಿಬ್ಬರೂ ಮೌನವಾಗಿ ಮರದ ಮುಂದೆ ನಿಂತೆವು. ಆಗ ವಿಲಕ್ಷಣವಾದ ಘಟನೆ ನಡೆದು ಹೋಯಿತು. ಒಮ್ಮೆ ಗಾಳಿ ಜೋರಾಗಿ ಬೀಸಿತು. ಮರುಕ್ಷಣವೇ ನೋಡನೋಡುತ್ತಿದ್ದಂತೆ ಲಟಪಟನೆಂದು ಬೆಳಗಿ ಮರದಲ್ಲಿ ಉಳಿದಿದ್ದ ಅದರ ದೈತ್ಯಗಾತ್ರದ ಶಾಖೆ ಮುರಿದು ನಿಧಾನವಾಗಿ ನೆಲಕ್ಕೆ ಬಿದು ಒಮ್ಮೆ ಅದುರಿ ನಿಶ್ಯಬ್ದವಾಗಿ ಹೋಯಿತು.
ನಾನು ಅವಕ್ಕಾಗಿ ನಿಂತು ಹೋದೆ ನನ್ನ ತಾತ ಒಂದು ಕ್ಷಣ ಮರದ ಬಳಿಗೆ ಸರಸರನೆ ಹೋಗಿ ಬಿದಿದ್ದ ಕೊಂಬೆಯನ್ನು ಕೈಯಿಂದ ಸವರಿದರು. ಅವರ ಕಣ್ಣಿನಿಂದ ಉದುರಿದ ಹನಿಗಳು ಬಿದ್ದು ಹೋದ ಕೊಂಬೆಗೆ ಬಾಷ್ಪಾಭಿಷೇಕ ಮಾಡಿದವು. ಆ ಸ್ವಪ್ನದ ಅರ್ಥ ಏನು? ಸ್ವಪ್ನದಲ್ಲಿ ಮರವು ಬಂದು ಹೇಳೀದಂತೆಯೇ ಪ್ರತ್ಯಕ್ಷ್ಯ ನಡೆದು ಹೋಯಿತಲ್ಲಾ? ಮರದ ಆತ್ಮವೇ ಮನುಷ್ಯನ ಮನಸ್ಸಿನೊಡನೆ ಸಂಪರ್ಕಗೊಂಡು ಈ ಅಲೌಕಿಕ ಘಟನೆ ಜರುಗಿತೋ? ಅಥವಾ ಸ್ವಪ್ನದಲ್ಲಿ ಹೇಳಿದಂತೆಯೇ ಜರುಗಿದ್ದು ಕೇವಲ ಕಾಕತಾಳೀಯವೋ? ವ್ಯಾಖ್ಯಾನಿಸುವುದು ಕಷ್ಟ. ಅದೇನೇ ಇದ್ದರೂ ಮನುಷ್ಯನಿಗೆ ಆತನ ಕಣ್ಮುಂದೇಯೇ ಇರುವ, ಚಿಕ್ಕಂದಿನಿಂದ ನೋಡಿದ, ಪ್ರೀತಿಸಿದ, ದೈವಸ್ವರೂಪಿಯೆಂದು ಬಗೆದ ಮರದೊಡನೆ ಭಾವಾತ್ಮಕ ಸಂಬಂಧವಿರಿವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಈ ಘಟನೆಯ ಬಗ್ಗೆ ಮನಶಾಸ್ತ್ರದಲ್ಲಿ ಅಥವಾ ವೈಜ್ಞಾನಿಕವಾಗಿ ವಿವರಣೆ ಏನೇ ಇರಲಿ, ಈ ಘಟನೆಯನ್ನು ನೆನೆಸಿದಾಗ ನನ್ನ ಮೈ ಇಂದೂ ರೋಮಾಂಚನಗೊಳ್ಳುತ್ತದೆ. ಸ್ವಪ್ನದಲ್ಲಿ ಬಂದಂತೆಯೇ ಎದುರಿಗೆ ನಡೆದುಬಿಟ್ಟಿದ್ದರಿಂದ ಮುಂದಾಗುವುದನ್ನು ಮನಸ್ಸು ಕಂಡುಕೊಳ್ಳಬಲ್ಲದೇನೋ ಎನ್ನಿಸುತ್ತದೆ. ಮನುಷ್ಯನಿಗೆ ತಿಳಿಯದ ನಿಗೂಡ ರಹಸ್ಯಗಳು ವಿಶ್ವದಲ್ಲಿ ನಮ್ಮ ಸುತ್ತಲೇ ಸುಳಿದಾಡುತ್ತಿವೆ ಎಂಬಂತೆ ಭಾಸವಾಗುತ್ತದೆ.
ಮೇಲಿನ ಘಟನೆಯ ನಿಗೂಢತೆಯನ್ನು ಬಿಟ್ಟು ಅದರಲ್ಲಿರುವ ಮನುಷ್ಯ ಹಾಗೂ ಪ್ರಕೃತಿಯ ಭಾವಾತ್ಮಕ ಸಂಬಂಧವನ್ನು ನೋಡಿದಾಗ, ಪ್ರತಿಯೊಬ್ಬ ಮನುಷ್ಯನೂ ತನ್ನ ಸುತ್ತ ಇರುವ ಪ್ರಕೃತಿಯಡನೆ ಆ ರೀತಿಯ ಸಂಬಂಧವನ್ನು ಇಟ್ಟುಕೊಳ್ಳುವುದಾದರೆ ನಮ್ಮ ಪರಿಸರಕ್ಕೆ ಅದೆಷ್ಟು ಕ್ಷೇಮ ಎನ್ನಿಸುದೆಲ್ಲವೇ.

ನೀ ದುಡಿವ ಹಾದಿಯಲ್ಲಿ ನೂರೆಂಟು ಮುಳ್ಳುಗಳು!


ಹೆಣ್ಣು ಅಬಲೆಯಲ್ಲ, ಸಬಲೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾಳೆ, ಪುರುಷರಿಗೆ ಸರಿಸಮಾನಳಾಗಿ ಜವಾಬ್ದಾರಿಯನ್ನು ಹೊತ್ತಿದ್ದಾಳೆ ಎಂದು ಎಷ್ಟೇ ಬೊಗಳೆ ಹೊಡೆದುಕೊಂಡರೂ ವಸ್ತುಸ್ಥಿತಿ ತಿಳಿದಂತಿಲ್ಲ. ವಿಪರ್ಯಾಸವೆಂದರೆ, ಇರಿವ ಪುರುಷ ಕಂಗಳ ಮಧ್ಯೆ ಮಹಿಳೆ ಇನ್ನೂ ಹರಿಣಿಯಂತಿದ್ದಾಳೆ.

* ರೂಪ.ಎಸ್

ಇಂದಿನ ದುಬಾರಿ ದಿನಗಳಲ್ಲಿ ಮಹಿಳೆಯೂ ದುಡಿಯಬೇಕು, ಅದು ಅನಿವಾರ್ಯ. ನಾನು ದುಡಿದು ಕುಟುಂಬವನ್ನು ಸಾಕಬಲ್ಲೆ ಎನ್ನುತ್ತಾಳೆ ಅವಳು, ಅದು ಆತ್ಮ ವಿಶ್ವಾಸ. ಮನೆಯೊಡತಿ ಎಂಬ ಪಟ್ಟವನ್ನು ಇಂದಿನ ವಿದ್ಯಾವಂತ ಯುವತಿಗೆ ಇಷ್ಟವಾಗುವುದಿಲ್ಲ. ಮನೆಯಡತಿ ಎಂಬಾಕೆ ಗಂಡನ ಚಾಕರಿ, ಮಕ್ಕಳ ಪಾಲನೆ, ಕಸ ಮುಸರೆಯ ಆಳಾಗಿ ಜೀವನ ಸವೆಸಿರುವುದನ್ನು ಅವಳು ಕಣ್ಣಾರೆ ಕಂಡಾಕೆ ಸ್ವಾವಲಂಬನೆಯತ್ತಲೂ ಹೆಜ್ಜೆ ಇಟ್ಟಿದ್ದಾಳೆ.

ಸ್ವಾತಂತ್ರ್ಯ, ಸ್ವಾವಲಂಬನೆ ಹಾಗೂ ಸ್ವಾಭಿಮಾನದತ್ತ ದಿಟ್ಟ ಹೆಜ್ಜೆ ಇಟ್ಟಿರುವ ಅನೇಕ ಮಹಿಳೆಯರು ಪಟ್ಟು ಹಿಟಿದು ಪದವಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗುತ್ತಿದ್ದಾರೆ. ಕೆಲಸ ಮಾಡಲೇಬೇಕೆಂದು ಹಟಕ್ಕೆ ಬಿದ್ದು ಹತ್ತಾರು ಕಂಪನಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರ ಶ್ರಮ, ಶ್ರದ್ದೆ, ಜಾಣ್ಮೆ ಮತ್ತು ಪ್ರಾಮಾಣಿಕತೆಗೆ ಉದ್ಯೋಗವೂ ಸಿಗುತ್ತಿವೆ. ಆದರೆ, ಈ ವನಿತೆಯರ ದುಡಿವ ಹಾದಿಯ ಮುಂದಿನ ಪಯಣ ಅದೆಷ್ಟು ಸುರಕ್ಷಿತ?

ತಾವು ಸಂತೃಪ್ತರು ಎಂದು ಹೇಳಿಕೊಳ್ಳುವ ಎಷ್ಟೋ ಮಹಿಳೆಯರು ಸಹೋದ್ಯೋಗಿಗಳ ಜತೆ ಉಸಿರು ಹಿಡಿದು ಹೆಣಗಾಡುತ್ತಿದ್ದಾರೆ. ಆದರೆ, ಪ್ರೀತಿಸಿ ಕೈ ಹಿಡಿದ ಪತಿಗೆ ಅವಳಿಗಿಂತ ಅವಳ ಸಂಬಳದ ಮೇಲೆಯೇ ಹೆಚ್ಚು ಪ್ರೀತಿ, ಮಕ್ಕಳ ಮನಸ್ಸಿನಲ್ಲಿ ಇವಳೇ ಮಲತಾಯಿ, ಬಂಧುಗಳ ದೃಷ್ಟಿಯಲ್ಲಿ ಗರ್ವಿಷ್ಠೆ ಎಂಬ ಅವಪೇಕ್ಷಿತ ಪದವಿಗಳು ಕುಟುಕುವುದು ತಪ್ಪುತ್ತಿಲ್ಲ. ಇಷ್ಟು ಸಾಕಲ್ಲ ಉದ್ಯೋಗಸ್ಥಮಹಿಳೆ ಕುಸಿಯಲು?

ದುಡಿಯುವ ಅಬಲೆಯರು

ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹೊರಟ ಎಷ್ಟೋ ಮಹಿಳೆಯರು ಈಗಾಗಲೇ ಕಾಲಲ್ಲಿ ಶಕ್ತಿ ಕಳೆದುಕೊಂಡವರಂತೆ ಹೈರಾಣಾಗಿದ್ದಾರೆ ಎನ್ನುವ ಅಘಾತಕಾರಿ ಸತ್ಯವನ್ನು ಜಾಗತಿಕ ಮಹಿಳಾ ಒಕ್ಕೂಟ ಬಯಲು ಮಾಡಿದೆ. ಉದ್ಯೋಗಸ್ಥ ಮಹಿಳೆಯರ ಸ್ಥಾನಮಾನ ಮತ್ತು ಮಾನಸಿಕ ಸ್ಥಿರತೆ ಕುರಿತಂತೆ ಈ ಒಕ್ಕೂಟ ಜಗತ್ತಿನ ಪ್ರಬಲ 18 ರಾಷ್ಟ್ರಗಳಲ್ಲಿ ಸುಮಾರು ಎರಡು ತಿಂಗಳ ಕಾಲ ಅಧ್ಯಯನ ನಡೆಸಿದ ಬಳಿಕ ತನ್ನ ವರದಿಯನ್ನು ಬಹಿರಂಗ ಮಾಡಿದ್ದು, ಮಹಿಳೆಯರ ಬಗೆಗಿನ ಅಭಿಪ್ರಾಯಗಳು ಈ ಪುರುಷ ಪ್ರಾಬಲ್ಯದ ಸಮಾಜದಲ್ಲಿ ಇನ್ನೂ ಬದಲಾಗಿಲ್ಲ ಎನ್ನುವುದನ್ನು ಎತ್ತಿ ಹೇಳಿದೆ.

ತಾವು ಅತ್ಯಂತ ಮುಂದುವರೆದವರು, ಪ್ರಗತಿಪರರು ಮತ್ತು ಲಿಂಗ ಸಮಾನತೆಗೆ ಒತ್ತು ಕೊಡುವವರು ಎಂದು ಬೆನ್ನು ತಟ್ಟಿಕೊಳ್ಳುವ ರಾಷ್ಟ್ರಗಳಲ್ಲೂ ದುಡಿವ ಮಹಿಳೆ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆ, ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. ತನಗಾರೂ ಇಲ್ಲ, ತಾನು ಅಸಹಾಯಕಳು ಎನ್ನುವ ಅತಂತ್ರತೆ ಅವಳನ್ನು ಕಾಡುತ್ತಿದೆ! ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಹವಣಿಸುತ್ತಿರುವ ರಾಷ್ಟ್ರಗಳ ಕಥೆಯೂ ಇದೇ ರೀತಿಯದ್ದು, ಅಲ್ಲಿನ ಬಹುತೇಕ ಪತಿ ಮಹಾಶಯರು ತಮ್ಮ ಉದ್ಯೋಗಸ್ಥ ಪತ್ನಿಯರ ಬಗ್ಗೆ "ನಾನಾಗಿಯೇ ಅವಳಿಗೆ ನೀಡಿದ ಸ್ವಾತಂತ್ರ್ಯ ನಾನು ತೋರುತ್ತಿರುವ ದಯೆ" ಎನ್ನುವ ಭಾವನೆಯಲ್ಲಿದ್ದಾರೆ.

ತಪ್ಪುಗಳಿಗೆ ಇವಳೇ ಹೊಣೆ

ಉದ್ಯೋಗಸ್ಥ ಮಹಿಳೆಯನ್ನು ಅಳತೆ ಮಾಡುವ ದೃಷ್ಟಿಕೋನ ಬೇರೆ ಬೇರೆಯಾಗಿದ್ದರೂ ಹಿಂದೆ ಇರುವುದು ಮಾತ್ರ ಪೂರ್ವಗ್ರಹ ಪೀಡಿತ ಪುರುಷ ಮನಸ್ಸು ಅಷ್ಟೇ ಎನ್ನುತ್ತಿದೆ ವರದಿ. ಗಂಡ ಹಾದಿ ತಪ್ಪಿದರೆ ನಿನ್ನ ಪತಿಯನ್ನು ನೀನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅದಕ್ಕಾಗಿ ಅವನು ಹಾಳಾಗಿದ್ದಾನೆ ಎಂದು ಅವಳನ್ನು ಹೊಣೆ ಮಾಡಲಾಗುತ್ತಿದೆ. ಮಕ್ಕಳು ದಡ್ಡರಾದರೂ ಗೂಬೆ ಇವಳ ತಲೆಗೆ, ಇನ್ನು ವೃದ್ದ ಅತ್ತೆ -ಮಾವಂದಿರ ಸೇವೆಗೆ ಇವಳೆ ಆಗಬೇಕಂತೆ. ಇಲ್ಲದಿದ್ದರೆ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾಳೆ, ತಮ್ಮ ರೋಗ ಉಲ್ಬಣಕ್ಕೆ ಇವಳೇ ಕಾರಣ ಎನ್ನುವುದು ಅವರ ಆರೋಪ.

ಬಂಧುಗಳ ದೃಷ್ಟಿಯಲ್ಲೂ ಇವಳು ವಿಭಿನ್ನಳಾಗಿಲ್ಲ. ಕೆಲಸಕ್ಕೆ ಹೋಗುವ ಅವಸರದಲ್ಲಿ ಅವರನ್ನು ಸರಿಯಾಗಿ ಉಪಚರಿಸಲಿಕ್ಕೆ ಆಗದಿದ್ದರೆ ಊರೆಲ್ಲ ಟಾಂಟಾಂ ಹೊಡೆದು ಇವಳನ್ನು ಕಾರಣೀಬೂತಳನ್ನಾಗಿ ಮಾಡುತ್ತಾರೆ. ಮನೆಗೆಲಸಕ್ಕೆ ಪುರುಷ ಅರ್ಹನಲ್ಲ. ಅದೇನಿದ್ದರೂ ಮಹಿಳೆಯ ಜವಾಬ್ದಾರಿ ಎನ್ನುವ ಸಾರ್ವಕಾಲಿಕ ತೀರ್ಪಿಗೆ ಎಲ್ಲ ರಾಷ್ಟ್ರಗಳು ಬದ್ದವಾದಂತಿದೆ ಹಾಗಾಗಿ ಅವಳು ಉದ್ಯೋಗಸ್ಥ ಮಹಿಳೆಯಾಗುವುದನ್ನು ಮನಃ ಪೂರ್ವಕವಾಗಿ ಯಾರೂ ಒಪುವುದಿಲ್ಲ ಎನ್ನುತ್ತಿದೆ ಒಕ್ಕೂಟದ ವರದಿ.

ಇರಿವ ಕಂಗಳ ಮದ್ಯೆ

ಹೊರಗಿನ ಪ್ರಪಂಚದ ಏನೆಲ್ಲಾ ವೈರುದ್ಯ, ವರಾತಗಳನ್ನು ಅವುಡುಗಚ್ಚಿ ಸಹಿಸಿ ಉದ್ಯೋಗಕ್ಕೆ ಬರುವ ಇವಳ ಕಚೇರಿ ವಾತಾವರಣ ಇನ್ನೂ ಭಯಾನಕ. ಇರಿವ ಕಂಗಳ ಮಧ್ಯೆ ಇವಳೊಬ್ಬ ಹರಿಣಿ! ಅವಳು ತೊಡುವ ಬಟ್ಟೆ. ತುಟಿಗೆ ಹಚ್ಚಿದ ಲಿಪ್ ಸ್ಟಿಕ್ , ಉಬ್ಬು ತಗ್ಗಿನ ಅಂಗ ಸೌಷ್ಟವ, ನೋಟದಲ್ಲಿನ ಚಂಚಲತೆ ಮತ್ತು ಅವಳು ಮತ್ತೊಬ್ಬರೊಂದಿಗೆ ಹೊಂದುವ ಸಲುಗೆಯ ಬಗ್ಗೆಯೇ ಕಚೇರಿಯಲ್ಲಿ ಹೆಚ್ಚು ಚರ್ಚೆಯಾಗುತ್ತದೆಯೇ ವಿನಃ ಅವಳ ಪ್ರತಿಭೆ, ಶ್ರಮ ಮತ್ತು ಸಾಧನೆ ಅಲ್ಲ ಎನ್ನುವುದನ್ನು ವರದಿ ಸ್ಪಷ್ಟಪಡಿಸಿದೆ.

ದುಡಿವ ಕಚೇರಿಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂದು ಸುಮ್ಮನೆ ಇದ್ದರೆ ಅವಳ ತಪ್ಪುಗಳ ಹುಡುಕುವವರ ಮತ್ತು ಅವಳು ದಡ್ಡಿ ಎನ್ನುವ ಪಟ್ಟ ಕಟ್ಟುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಸೋಷಿಯಲ್ ಆಗೋಣವೆಂದರೂ ಪ್ರತಿಯೊಬ್ಬ ಸಹೋದ್ಯೋಗಿಯ ಮನಸ್ಸಿನಲ್ಲೂ ಚಿತ್ತ ಚಿತ್ತಾರ. ನಗುವೆ ಮುಳುವು, ಹರಟೆಯೇ ಹೊಂಡ, ಈ ದುಡಿವ ಹಾದಿಯಲ್ಲಿ ನೂರೆಂಟು ಕಲ್ಲು-ಮುಳ್ಳುಗಳು, ನೋವು ಕೊಡುವವರೇ ಅಧಿಕ. ನೆರವಿಗೆ ಬರುವ ಹಸ್ತಗಳು ಬಹು ಕಿರಿದು! ಮಹಿಳಾ ಸಾಧನೆಯ ನಿರ್ದಶನಕ್ಕೆ ಕಲ್ಪನಾ ಚಾವ್ಲಾ, ಕಿರಣ ಬೇಡಿ, ಮದರ್ ತೆರೆಸಾ ಅವರನ್ನು ಹೆಸರಿಸುವ ಜಗತ್ತು, ನಿತ್ಯ ಸಾಯುವ ಕೋಟಿ ಕೋಟಿ ಉದ್ಯೋಗಸ್ಥರ ಬಗ್ಗೆ ಹೇಳುವುದೇ ಇಲ್ಲ.

ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದೆ... !


ನಾನೇ ಕಣೋ,ನಿನ್ನಿಂದ ನಗುವಿನ ಪಾಠ ಕಲಿತ ಸಂಕಟಗಳ ಒಡತಿ,ನನ್ನ ನಲಿವಿಗೆ ಗುರುವಾಗಿದ್ದ ನೀನೆ ಇವತ್ತು ಒಂದು ಅಗಾಧ ನೋವಿಗೆ ಕಾರಣವಾಗಿದ್ದೀಯ, ಈವರೆಗೂ ಮನಸ್ಸಿಗೆ ಇಷ್ಟೇ ಇಷ್ಟು ಬೇಸರವಾದರೂ ನಿನ್ನ ನೆನಪಾಗ್ತಿತ್ತು, ತಕ್ಷಣವೇ ನಿನ್ನಲ್ಲಿ ಹೇಳಿ ಹಗುರವಾಗ್ತಿದ್ದೆ, ಆದರೆ ಈಗ ಯಾರ ಬಳೀ ಹೇಳಲಿ ? ಅಸಲು ನೀನು ನನಗೆ ವರ್ಷಾನುವರ್ಷಗಳ ಗೆಳಯನೇನಲ್ಲ, ಕೆಲವೇ ತಿಂಗಳುಗಳ , ಹಿಂದೆ ಯಾವೂದೋ ನಾಲ್ಕು ಸಾಲಿನ ಲೇಖನ ನೋಡಿ ನನ್ನ ಸೆಲ್ ಗೊಂದು ಪುಟ್ಟ ಸಂದೇಶ ಕಳಿಸಿ, ನಗುವಿನ ಹೊಳೆ ಹರಿಸಿ ಪರಿಚಯನಾದವನು, ನೋಡ ನೋಡುತ್ತಲೇ ಕೆಲವೇ ದಿನಗಳಲ್ಲಿ ಆತ್ಮ ಬಂಧುವಾದೆ!

ಹೌದಲ್ವೆನೋ , ಮೊನ್ನೆ ತನಕ ನಾವಿಬ್ಬರೂ ಮುಖತಃ ಭೇಟಿಯಾಗಿರಲಿಲ್ಲ ನೀನು ಹೀಗೆ ಇರಬಹುದಾ ? ಅನ್ನೋ ಸಣ್ಣ ಕಲ್ಪನೆ ಕೂಡ ನನಗಿರಲಿಲ್ಲ, ಆದರೂ ನಿನ್ನೊಂದಿಗೆ ಆಡಿದ ಮಾತುಗಳಷ್ಟು..? ಹಂಚಿಕೊಂಡ ನೋವಿನ ಕಥೆಗಳೆಷ್ಟು ....? ಯಾವತ್ತೂ ಯಾರ ಮುಂದೆಯೂ ಕಣ್ಣೀರಾಗದ ನಾನು ನಿನ್ನದೆದುರು ಕಣ್ಣೀರ ಕಡಲಾಗ್ತೀನಲ್ಲ ಯಾಕೆ ? ಸಿಂಪಥಿಗಾ ? ಸಮಾಧಾನಕ್ಕಾ ? ನಂಗೂ ಗೊತ್ತಿಲ್ಲ ಕಣೋ, ಒಂದು ಮಾತ್ರ ನಿಜ, ನಿನಗೆ ಪರಿಶುದ್ಧ ಮನಸ್ಸಿದೆ, ಅದರಲ್ಲಿ ಅಮ್ಮನ ಪ್ರೀತಿಯಿದೆ. ಆ ದೇವರಂತ ಪ್ರೀತಿಗೆ ಈ ಮನಸ್ಸು ಸುಮ್ಮನೆ ಹಂಬಲಿಸುತ್ತಿದೆ.

ನನಗಿಂತ ನಿನಗೆ ಚೆನ್ನಾಗಿ ಗೊತ್ತಿದೆ ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೀನಿ ಅಂತ, ನೀನು ನನಗೆ ಕೇವಲ ಗೆಳೆಯನೆ ಪ್ರೀತಿಯ ಪ್ರತಿರೂಪವೆ? ನಿನ್ನಡೆಗೆ ನನಗಿರುವುದು ಆಕರ್ಷಣೆಯಾ? ಪ್ರೀತಿಯ ? ಇದ್ಯಾವುದನ್ನೂ ಯೋಚಿಸದೆ. ಅದೊಂದು ಮುಂಜಾನೆ... ನಿನ್ನ ಬದುಕಿಗೆ ನನ್ನನ್ನು ಬರಮಾಡಿಕೊಳ್ಳುತ್ತೀಯಾ..? ಅಂತ ಕೇಳಿದವಳು ನಾನು , ಇವತ್ತಿಗೂ ಹಾಗೆ ಕೇಳಿದ್ದು ಸರಿಯಾ ? ತಪ್ಪಾ? ಗೊತ್ತಿಲ್ವೊ ಆ ನನ್ನ ವಿನಂತಿಯನ್ನು ನೀನು ಒಪ್ಪಿಕೊಂಡೆಯಾ? ತಿರಸ್ಕರಿಸಿದ್ಯಾ ? ತಿಳಿಯಲಿಲ್ಲ. ಆದರೂ ಭಾವನೆಗಳ ಜತೆ ನಾನು ಬಾಂಧವ್ಯ ಬೆಳೆಸಿದೆ. ವಾಸ್ತವ ಮರೆತು ಕಲ್ಪನೆಗಳ ಬೆನ್ನತ್ತಿದೆ . ಇದೆಲ್ಲವನ್ನೂ ತಿಳಿದ ನೀನು ನನ್ನ ಮನದ ಬೆಚ್ಚನೆಯ ಪ್ರೀತಿಯನ್ನು ಬಿರುಸಾಗಿ ತಿರಸ್ಕರಿಸಿದೆ ಅದನ್ನು ಕಾಲದ ಪರಿಧಿಗೆ ಕೊಟ್ಟು ಸುಮ್ಮನಾದೆ.

ನೀನು ಸುಮ್ಮನಿದ್ದುದನ್ನು ಒಲವ ಒಪ್ಪಿಗೆ ಅಂದುಕೊಂಡೆನಾ? ಉಹುಂ.ಗೊತ್ತಿಲ್ಲ ಕಣೋ..ಎಷ್ಟೇ ಆದರೂ ನೀನು ದೇವರಂಥ ಹುಡುಗನಲ್ಲಾ? ನನ್ನ ಮನಸ್ಸು ನಿನಗೆ ತಿಳಿದೇ ಇದ್ದಿತಾ? ಎಷ್ಟು ಜಾಗ್ರತೆ ವಹಿಸಿ ಪ್ರೀತಿಯೆಂಬ ಕಾನನದಿಂದ ಸ್ನೇಹದ ಊರಿಗೆ ಕರೆತಂದೆ ಅಲ್ವಾ? ನಿನಗೆ ಸ್ನೇಹಿತನಾಗಿ ಇರಬಲ್ಲೆ" ಎಂಬ ನಿನ್ನ ಮಾತು ತಡವಾಗಿ ಏನೂ ನನ್ನ ತಲುಪಿಲ್ಲ! ಅವತ್ತಿನ ನನ್ನ ಆಕ್ರಂದನವನ್ನು ನೋಡಿ ಬದುಕು ಗಹಗಹಿಸಿತ್ತು. ವಿಧಿ ವಿಲಕ್ಷಣವಾಗಿ ನಕ್ಕಿತ್ತು ನಿಜ. ಕಣೋ, ಇಷ್ಟು ವರ್ಷದ ಈ ಅವಧಿಯಲ್ಲಿ ಯಾವತ್ತಿಗೂ ನಂಗೆ ಹೀಗೆಲ್ಲ ಅನ್ನಿಸಲಿಲ್ಲ...

ಈ ಪುಟ್ಟ ಬದುಕನ್ನು ಮತ್ತೊಬ್ಬರ ಜತೆ ಹಂಚಿಕೊಳ್ಳೊ ಕನಸು ಕಂಡಿರಲಿಲ್ಲ. ಅದ್ಯಾಕೋ ನಿನ್ನ ಒಡನಾಟದ ಜತೆ ಜತೆಯಲಿ ಸಾಗೋ ಅದಮ್ಯ ಆಸೆ ನನ್ನದಾಗಿತ್ತು. ಪ್ರೀತಿಯಲ್ಲಿ ತಿರಸ್ಕರಿಸಿದರೂ ಸ್ನೇಹಿತರಾಗಿ ಉಳಿತೀನಿ ಅಂತ ಪ್ರಮಾಣ ಮಾಡಿದ್ದೆ ಮತ್ತು ನೀನು ಮಾತಿಗೆ ತಪ್ಪುವವನಲ್ಲ ಅಲ್ವಾ? ಆ ಕಾರಣಕ್ಕೆ ನನ್ನ ಮನದ ಅಷ್ಟು ಭಾವನೆಗಳನ್ನು ಸಮಾಧಿ ಮಾಡಿ ನಿನ್ನ ಸ್ನೇಹಕ್ಕೆ ಮನಸ್ಸು ಒಪ್ಪಿಸಿದ್ದೆ.... ಆದರೀಗ ಆ ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದಂತಿದೆ. ಇತ್ತೀಚಿನ ನಿನ್ನ ನಡವಳಿಕೆ ಮನಸ್ಸನ್ನ ಭೀತಿಗೊಳಿಸಿದೆ ಕಣೋ....

ಮೊದಲೆಲ್ಲಾ ನನ್ನ ಪ್ರತಿ ಸಂಕಟಕ್ಕೂ ಸಾಂತ್ವನದ ಮಡಿಲಾಗ್ತಿದ್ದ. ನೀನು ಈಗ ಗದರಿಕೆಯ ಮಾತುಗಳನ್ನು ಆಡ್ತಾ ಇದ್ದೀಯ ! ಕೇಳಿದರೆ ಮತ್ತಷ್ಟು ಒರಟಾಗ್ತೀಯ ಆತ್ಮೀಯತೆಯ ಕಡಲಲ್ಲಿ ಅಸಮಾಧಾನದ ಅಲೆಗಳು ಅಬ್ಬರಿಸ್ತಿವೆ, ಯಾಕೋ ಹೀಗೆಲ್ಲಾ ಆಗ್ತಿದೆ? ನಿಜಕ್ಕೂ ನೀನು ಬದಲಾಗಿದ್ದೀಯ ? ಆಥ್ವಾ ನಾನೇ ನಿನ್ನನ್ನು ತಪ್ಪು ತಿಳಿದಿದ್ದೀನಾ ? ನಿನ್ನ ಅಂಗೈಯ ಕಿರುಬೆರಳು ಹಿಡಿದು ಸ್ನೇಹದ ಪಯಣ ಬೆಳೆಸೋ ನನ್ನ ಪುಟ್ಟ ಆಸೆ ತಪ್ಪಾ ? ಉತ್ತರವಿಲ್ಲದ ಈ ಎಲ್ಲಾ ಪ್ರಶ್ನೆಗಳಿಗೂ ಖುದ್ದು ನಿನ್ನಿಂದಲೇ ಉತ್ತರಬೇಕಿದೆ ನೀನು ಸ್ನೇಹದಿಂದಲೂ ದೂರವಾಗ್ತಾ ಇದ್ದೀಯ ಎಂಬ ನನ್ನ ಮನದ ಆತಂಕವನ್ನು ಸುಳ್ಳು ಮಾಡಲು ಒಮ್ಮೆ ಭೇಟಿ ಯಾಗು.. ...!

ಇಂತಿ ನಿನ್ನ ದೂರವಾದ ಆಪ್ತಗೆಳತಿ...?
ರೂಪ.ಎಸ್

Sunday, September 13, 2009

ಹಲೋ... ನಿಮ್ಮನ್ನೇ ಕೇಳ್ತಿರೋದು ಹಳೆ ಗೆಳತಿ ಸಿಕ್ಕಿದ್ಳಾ?


ಒಂದು ಮುಗುಳ್ನಗು, ತೊಟ್ಟು ಕಣ್ಣೀರು, ಮೆಲುವಾದ ಮಾತು, ನೆನಪಿನ ಬುಗ್ಗೆ, ಬರ್ತಿಯಾ ಮನೆಗೆ ಅನ್ನುವ ಆತ್ಮೀಯ ಆಹ್ವಾನ... ಒಹ್... ಆ ಹಳೇ ಗೆಳತಿ ಸಿಕ್ಕಾಗ ಕಾಲು ನೆಲದ ಮೇಲಿರುವುದಿಲ್ಲ, ಮನಸು ಹಕ್ಕಿಯಾಗದೆ ಉಳಿಯುವುದಿಲ್ಲ... ಆ ಮಾಂತ್ರಿಕ ಶಕ್ತಿ ಆ ಗೆಳೆತನದ ಬಾಂಧವ್ಯದಲ್ಲಿದೆ. ಅಂದ ಹಾಗೆ, ನೀವೆಂದಾದರೂ ಹಳೆ ಗೆಳತಿಯನ್ನು ಹುಡುಕಿ ಹೋಗಿದ್ದಿರಾ? ಹಳೆ ಗೆಳತಿಯ ನೆನಪಾದರೂ ಇದೆಯಾ?
* ರೂಪ.ಎಸ್

ಬೆಳಿಗ್ಗೆ ಏನು ತಿಂಡಿ ಮಾಡಬೇಕು, ಮಧ್ಯಾಹ್ನ ಏನು ಅಡುಗೆ ಮಾಡಬೇಕು ಎಂಬ ಚಿಂತೆಯೇ? ಇಲ್ಲಿ ಕೇಳಿ, ನನ್ನ ಒಂದೇ ಒಂದು ಪ್ರಶ್ನೆಗೆ ನೀವು ಉತ್ತರಿಸಲೇಬೇಕು. ಎಲ್ಲಿ ನಿಮ್ಮ ಹೈಸ್ಕೂಲ್ ಸ್ನೇಹಿತರ ಹೆಸರನ್ನು ಹೇಳಿ ನೋಡೋಣ. ಹೋಗಲಿ ಕಾಲೇಜಿನ ಗೆಳತಿಯಾರಾದರೂ ನಿಮಗೆ ನೆನಪಿದೆಯೇ? ನಿಮ್ಮ ಮದುವೆಗೆ ಬಂದಿದ್ದ ಫ್ರೆಂಡ್ಸ್ ಸಂಪರ್ಕ ಇನ್ನೂ ಇದೆಯೇ? ಯಾವಾಗಲಾದರೊಮ್ಮೆ ಮದುವೆಯ ಆಲ್ಬಂ ನೋಡಿದಾಗ, ಮದುವೆಯ ಸಿಡಿ ನೋಡಿದಾಗ ಅವರೆಲ್ಲಾ ನಿಮಗೆ ನೆನಪಾಗಬಹುದಲ್ಲದೆ?
ನಿಮ್ಮ ಗಂಡ ಅವರ ಮಿತ್ರರನ್ನು"ಇವನು ನನ್ನ ಚಡ್ಡಿ ದೋಸ್ತ್. ನಾನು ಇವನು ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು"... ಎಂದೆಲ್ಲಾ ಹೇಳುವಾಗ ನಿಮಗೆ ನಿಮ್ಮ ಪ್ರಾಕ್ ದೋಸ್ತ್ ನೆನಪಾಗುವುದಿಲ್ಲವೇ? ಕುಂಟೆಬಿಲ್ಲೆಗೆ ಜೊತೆಯಾಗುತ್ತಿದ್ದವಳು,"ಅವನು ನನ್ನೇ ನೋಡುತ್ತಾನೆ, ಎಂದು ನಿಮ್ಮಲ್ಲಿ ಮಾತ್ರ ಪಿಸುಗುಟ್ಟಿದ್ದವಳು, ಅವನು ಏನೇನೋ ಬರೆದಿದ್ದಾನೆ, ನನಗೆ ಭಯಾಗುತ್ತೆ ಎಂದು ತನ್ನ ಮೊದಲ ಪ್ರೇಮ ಪತ್ರವನ್ನು ತೋರಿಸಿದವಳು", ನನಗೆ ಮದುವೆ ಸೆಟ್ ಆಯಿತು ಎಂದು ಲಗ್ನ ಪತ್ರಿಕೆ ಕೊಟ್ಟವಳು, ಮನೆಯವರ ವಿರುದ್ದ ಸಿಡಿದೆದ್ದು ಪ್ರಿಯಕರನ ಜೊತೆ ಓಡಿ ಹೋದವಳು, ನಿನ್ನ ಮದುವೆಗೆ ಬಂದು ನಿನ್ನ ಪಾರ್ಟ್‌ನರ್ ಚೆನ್ನಾಗಿದ್ದಾನೆ ಕಣೇ ಎಂದು ಕಣ್ಣಲ್ಲೇ ಸನ್ಹೆ ಮಾಡಿದಳು ಎಲ್ಲರೂ ನಿಮಗೆ ನೆನಪಿರಬೇಕಲ್ಲಾ?
ಮದುವೆ ಆಯಿತು, ಅತ್ತೆಯನ್ನು ಮೆಚ್ಚಿಸುವ ಭರದಲ್ಲಿ, ಗಂಡನನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ಮಕ್ಕಳ ಬೇಡಿಕೆ ಪೂರೈಸುವ ಕರ್ತವ್ಯದಲ್ಲಿ ನೀವು ನಿಮ್ಮನ್ನೆ ಮರೆತುಬಿಟ್ಟಿದ್ದೀರಾ? ನಿಮ್ಮ ಮನದ ಸುತ್ತ ಬರೀ ಗಂಡ, ಮಕ್ಕಳು, ಮನೆ ಇವಿಷ್ಟೆಯೇ? ನಿಮ್ಮ ಇಷ್ಟದ, ಬಾಲ್ಯದ ನಿಮ್ಮ ಯೌವನದ ಜೊತೆಗಾರರು ನಿಮಗೆ ಬೇಡವೇ? ಅವರನ್ನು ಮರೆತಿರಿ ಹೇಗೆ?
ಹಳೇ ಸಿನಿಮಾಗಳಲ್ಲಿ, ಕಥೆ ಕಾದಂಬರಿಗಳಲ್ಲಿದ್ದಂತೆ ಜೀವದ ಗೆಳತಿ ಮದುವೆಯಾಗಿ ಹೋದ ನಂತರ, ಆ ಗೆಳತಿಯನ್ನು ನೋಡುವ ಭಾಗ್ಯ ಒದಗಿಬರುತ್ತದೋ ಇಲ್ಲವೋ ಎಂದು ಕಂಗಾಲಾಗುವ ಕಾಲವಲ್ಲವೇ ಅಲ್ಲ ಇದು. ನಿಮ್ಮ ಗೆಳತಿ ಎಲ್ಲೇ ಇರಲಿ ಅವಳೊಂದಿಗೆ ನೀವು ಸಂಪರ್ಕ ಬೆಳೆಸಬಹುದು ಮೊಬೈಲ್ ಇದೆ, ಇಂಟರ್‍ನೆಟ್ ಇದೆ. ಬೆರಳ ತುದಿಯಲ್ಲೇ ಸಂಪರ್ಕ ಸಾಧಿಸಬಹುದು. ಹೀಗಿದ್ದರೂ ನೀವು ಏಕೆ ಅವರುಗಳ ಸಂಪರ್ಕ ಇಟ್ಟು ಕೊಂಡಿಲ್ಲ? ಏಕೆ ನೀವು ನಿಮ್ಮ ಆಪ್ತ ಸ್ನೇಹಿತರನ್ನು ನಿಮ್ಮ ಮನೆಗೆ ಅಹ್ವಾನಿಸುವುದಿಲ್ಲ? ನಿಮ್ಮ ಸ್ನೇಹಿತರವರ ಮನೆಗೆ ಕರೆದರೆ ನೀವು ಏಕೆ ಹೋಗುವುದಿಲ್ಲ?
ಮದುವೆಯಾದ ಮೇಲೆ ಎಲ್ಲಾ ಜವಾಬ್ದಾರಿಗಳು ಹೊರುವುದು ಎಂದು ಎಲ್ಲಾ ಹೆಣ್ಣು ಮಕ್ಕಳು ತಿಳಿದಿರುತ್ತಾರೆ ಮತ್ತು ಹಾಗೆಯೇ ಅದನ್ನು ಒಪ್ಪಿಕೊಂಡಿರುತ್ತಾರೆ. ಆದರೆ ಅಷ್ಟಕ್ಕೆ ನಿಮ್ಮ ಮನವನ್ನು ಸಂಕುಚಿತಗೊಳಿಸಿಕೊಳ್ಳಬೇಡಿ. ಕಾಲ್ಪನಿಕ ಟಿವಿ ಧಾರವಾಹಿಗಳ ಪಾತ್ರಗಳಲ್ಲೇ ನಿಮ್ಮನ್ನು ಕಾಣಲು ಪ್ರಯತ್ನಿಸಬೇಡಿ. ನಮ್ಮ ಜೀವನ ಕೇವಲ 20 ನಿಮಿಷಗಳ ಕಾಲ ಪ್ರಸಾರವಾಗುವ ದೈನಂದಿನ ಧಾರವಾಹಿಗಳಲ್ಲ. ಅಡುಗೆಮನೆಯಾಚೆಯೂ ಜೀವನವಿದೆ. ಧಾರಾವಾಹಿಗಳಾಚೆಯೂ ಭಾವನೆಗಳಿವೆ.ನನ್ನ ಮಗ ಸ್ಪೋರ್ಟ್ಸ್ ನಲ್ಲಿ ಫಸ್ಟ್, ಮಗಳು ಡ್ಯಾನ್ಸ್ ನಲ್ಲಿ ಮುಂದು, ಗಂಡನಿಗೆ ಪ್ರಮೋಷನ್ ಸಿಕ್ಕಿತು ಎಂದೋ ಅಥವಾ ನನ್ನ ಮಗ ಓದುವುದರಲ್ಲಿ ಹಿಂದೆ ಬಿದ್ದಿದ್ದಾನೆ, ಏನು ಮಾಡುವುದು ಮಗಳಿಗೆ ಸರಿಯಾದ ಸ್ಕೂಲಿಗೆ ಸೀಟ್ ಸಿಗುತ್ತಿಲ್ಲ, ಗಂಡನ ಕೆಲಸ ಪರವಾಗಿಲ್ಲ, ನಾನು ಏನಾದರೂ ಕೆಲಸ ಮಾಡಬಹುದೇ ನನ್ನ ಆರೋಗ್ಯ ಯಾಕೋ ಸರಿಯಾಗಿಲ್ಲ. 2 ಮಕ್ಕಳಾದ ಮೇಲೆ ನಾನೇನೋ ಕುಗ್ಗಿ ಹೋಗಿದ್ದೇನೆ. ಮನೆ ಸಾಲ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ನಿಮ್ಮ ಬೆಳೆದ ಮಗನ ಕುರಿತು ಸೊಸೆ ಅಳಿಯನ ಬಗ್ಗೆ...
ಹೀಗೆ ನಿಮ್ಮ ನೋವು ನಲಿವು ಸುಖ ದುಃಖದ ಕ್ಷಣಗಳ ಬಗ್ಗೆ ನಿಮ್ಮ ಗೆಳತಿಯರಲ್ಲಿ ಮನಬಿಚ್ಚಿ ಹಂಚಿಕೊಳ್ಳಿ. ಒಬ್ಬೊಬ್ಬರದೂ ಒಂದೊಂದು ಬಗೆಯ ಜೀವನ, ಒಬ್ಬೊಬ್ಬರದೂ ನವನವೀನ ಕಥೆ, ಒಬ್ಬೊಬ್ಬರ ಜೀವನವೂ ಕಲಿಸುವ ಪಾಠ. ಅದರಿಂದ ನಮ್ಮ ಜೀವನಕ್ಕೂ ಹೊಸ ಸೆಲೆ ಸಿಗಬಹುದು, ಅವರಿಗೂ ರೆಕ್ಕೆಬಿಚ್ಚಿ ಹಾರಾಡುವ ಉಮೇದು ಬರಬಹುದು.
ಅದಕ್ಕೇ ಸ್ನೇಹವನ್ನು ಉಳಿಸಿಕೊಳ್ಳಿ ಬೆಳೆಸಿಕೊಳ್ಳಿ. ಇವತ್ತು ನೀವು ನಿಮ್ಮ ಕೆಲಸವೆಲ್ಲಾ ಮುಗಿದ ಮೇಲೆ ಮಾಡಬೇಕಾದ ಮೊದಲ ಕೆಲಸ ಎಂದರೆ, ನಿಮಗೆ ನೆನಪಿರುವ ಎಲ್ಲಾ ಗೆಳತಿಯರ ಹೆಸರುಗಳನ್ನು ಪಟ್ಟಿ ಮಾಡಿ. ನಿಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಭೇಟಿಯಾದ ಗೆಳತಿಯರನ್ನು ನೆನಪಿಸಿಕೊಳ್ಳಿ. ಅವರ ಫೋನ್ ನಂಬರ್, ಮೊಬೈಲ್ ನಂಬರ್ ಅಥವಾ ವಿಳಾಸ ಇ-ಮೇಲ್ ಐಡಿ ಇದೆಯೇ ಚೆಕ್ ಮಾಡಿ. ಈ ಗೆಳತಿಯರಲ್ಲಿ ನಿಮಗೆ ಈಗಲೂ ಆಪ್ತರೆನಿಸುವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿ. ಒಬ್ಬರ ಮೂಲಕ ಇನ್ನೊಬ್ಬರ ಸುಳಿವು ಸಿಗಬಹುದು ಇಂದಿನ ಕಾಲದಲ್ಲಿ ಇದೇನು ಕಷ್ಟವಾಗಲಾರದು ಆದರೆ ನಿಮ್ಮ ಪ್ರಯತ್ನ ಬಿಡಬೇಡಿ.
ನಿಮಗೆ ಇಷ್ಟವಾಗದಿದ್ದ, ನಿಮ್ಮನ್ನು ದ್ವೇಷಿಸುತ್ತಿದ್ದ, ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತಿದ್ದ ಗೆಳತಿಯರು ಕೂಡ ಅಚಾನಕ್ಕಾಗಿ ಬಂದ ಫೋನ್ ಕರೆಯಿಂದಲೋ, ಪತ್ರದಿಂದಲೋ ಸಂಭ್ರಮಿಸದಿದ್ದರೆ ಕೇಳಿ. ಅಂದಿನ ಕಹಿನೆನಪುಗಳು ಕರಗಿ ಸಿಹಿನೆನಪುಗಳಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ. ಒಂದು ನಗು, ತೊಟ್ಟು ಕಣ್ಣೀರು, ಮೆಲುವಾದ ಮಾತು, ನೆನಪಿನ ಬುಗ್ಗೆ, ಬರ್ತಿಯಾ ಮನೆಗೆ ಅನ್ನುವ ಆತ್ಮೀಯ ಆಹ್ವಾನ ಎಂಥ ಕಹಿನೆನಪುಗಳನ್ನೂ ನಿವಾಳಿಸಿ ಬಿಸಾಕಿರುತ್ತದೆ. ಆ ಮಾಂತ್ರಿಕ ಶಕ್ತಿ ಆ ಗೆಳೆತನದ ಬಾಂಧವ್ಯದಲ್ಲಿದೆ.
ನಿಮ್ಮ ಬಾಲ್ಯದ ಕಾಲೇಜಿನ ಆಪ್ತ ಗೆಳತಿಯರು ಖಂಡಿತಾ ನಿಮಗೆ ಸಿಗುತ್ತಾರೆ. ಆಗ ಮತ್ತೊಮ್ಮೆ ಪಾಠ ಮಾಡುವಾಗ ನಿಮ್ಮ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಸುಂದರಿಯನ್ನೇ ನೋಡುತ್ತಿದ, ಇಂಗ್ಲೀಷ್ ಲೆಕ್ಚರರ್ ಕ್ಲಾಸಿಗೆ ಬಂಕ್ ಹೊಡೆದು, ಹಿಂದಿ ಸಿನಿಮಾ ನೋಡಿದ್ದು ಗೆಳತಿಗೆ ಪ್ರೇಮ ಪತ್ರ ಕೊಟ್ಟಿದ್ದು, ಪ್ರೇಮಕುದಿರಿಸಿದ್ದು, ತನ್ನ ಪ್ರಿಯಕರನ ಜೋತೆಗೆ ಓಡಿಹೋಗಲು ನೆರವಾಗಿದ್ದು, ಕಾಲೇಜಿನಲ್ಲಿ ಕುಖ್ಯಾತಿ ಪಡೆದಿದ್ದ ಲೈಲಾ ಮಜ್ನು ಜೋಡಿ... ಓಹ್! ಆ ದಿನಗಳು ಎಷ್ಟು ಚೆಂದವಾಗಿದ್ದುವಲ್ಲ? ಈ ದಿನಗಳನ್ನು ಕೂಡ ಅಷ್ಟೇ ಚೆಂದ ಮಾಡಿಕೊಳ್ಳುವ ಅವಕಾಶ ನಿಮ್ಮ ಕೈಯಲ್ಲಿದೆ. ಈಗಲೇ ಕಾರ್ಯತತ್ಪರರಾಗಿರಿ. ಆಲ್ ದಿ ಬೆಸ್ಟ್.ಹಳೆ ಗೆಳತಿ ಸಿಕ್ಕರೆ ನನಗೆ ಒಂದು ಪತ್ರ ಬರೆಯಲು ಮರೆಯಬೇಡಿ

Saturday, September 12, 2009

ತ್ಯಾಗದ ಹೆಸರಲ್ಲಿ ಪ್ರೀತಿಗೆ ಮೋಸಮಾಡಬೇಡಿ


ಪ್ರೀತಿ ಮದುರ, ತ್ಯಾಗ ಅಮರ ಅಂರತಾರಲ್ಲ ಹಾಗೆ ನನ್ನ ಪ್ರಕಾರ ತ್ಯಾಗ ಕ್ಷಣದ ಮಟ್ಟಿಗೆ, ಪ್ರೀತಿ ಅಮರ ಅದು ಜೀವ ಇರುವ ತನಕ.
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಈ ಹಾಡು ಕೇಳಿದರೆ ಏನೋ ಒಂದು ರೀತಿ ಅನುಭವ ಆಗುತ್ತದೆ, ಈಗಿನ ಹುಡುಗರು ಚಲನಚಿತ್ರ ನೋಡಿ ತ್ಯಾಗ ಮಾಡೋದೇ ಜಾಸ್ತಿ ಆಗಿದೆ, ಎಲ್ಲರೂ ಮುಂಗಾರು ಮಳೆ ನಾಯಕನನ್ನ ಮೀರಿಸೋ ಪ್ರಯತ್ನ ಮಾಡ್ತಾ ಇದ್ದಾರೆ.
ಆ ತ್ಯಾಗಕ್ಕೆ ಬಲಿಯಾದವರಲ್ಲಿ ನಾನೂ ಒಬ್ಬಳು, ನನ್ನ ಪ್ರೀತಿ ಕೂಡ ತ್ಯಾಗದಲ್ಲಿ ಕೊನೆಯಾಗುತ್ತದೆ, ಅಂತ ಗೊತ್ತು ,ನಾನು ಪ್ರೀತಿಸಿದವರನ್ನು ದೂರ ಆಗಿಲ್ಲ, ನನ್ನ ಪ್ರೀತಿ ಯಾವಾಗಲೂ ನನ್ನ ಜೊತೆಯಲ್ಲೆ ಇರುತ್ತದೆ, ನನಗೆ ಅಷ್ಟು ಸಾಕು ,
ನನ್ನ ಜೀವನದಲ್ಲಿ ಇಷ್ಟು ಗಾಡವಾಗಿ ಪ್ರೀತಿಸಿದೆ ಅನ್ನೋದೆ ಸಾಕು, ಆ ನೆನಪಲ್ಲೇ ಇರ‍್ತೀನಿ ಆದರೆ ಅವನ ಜಾಗಕ್ಕೆ ಬೇರೆಯವರಿಗೆ ಜಾಗ ಕೊಡಲು ನನ್ನಿಂದ ಸಾದ್ಯ ಇಲ್ಲ.
ಪ್ರೀತಿ ಕುರುಡು ಅಂತಾರೆ, ಆದ್ರೆ ಆ ಪ್ರೀತಿನೇ ಕೆಲವೊಮ್ಮೆ ದಾರಿ ದೀಪ ಆಗುತ್ತದೆ, ಒಬ್ಬ ಹುಡುಗ ಜವಬ್ದಾರಿ ಇಲ್ಲದೇ ತನ್ನ ಮನಸ್ಸಿಗೆ ಬಂದ ಹಾಗೆ ಬಿಂದಾಸ್ ಆಗಿ ತಿರಿಗ್ತಾ ಇರ‍್ತಾನೆ, ಅದೇ ಅವನನ್ನ ಪ್ರೀತಿಯ ಬಲೆಗೆ ಬಿದ್ದಾಗ ಅವನಿಗೆ ತಾನೆ ತಾನಾಗಿ ಜವಬ್ದಾರಿ ಬರುತ್ತದೆ, ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುತ್ತಾನೆ, ಇದೆಲ್ಲಾ ಸಹಜ ಪ್ರೀತಿ ಮಾಡೋದು ಮುಖ್ಯ ಅಲ್ಲ ಅದನ್ನು ಕಾಪಾಡಿಕೊಂಡು ಹೋಗೋದು ಮುಖ್ಯ ಪ್ರೀತಿಗೆ ಕೊನೆ ಅನ್ನೋದೆ ಇಲ್ಲ.
ಪ್ರೀತಿ ನಮಗೇನು ಕೊಡುತ್ತದೆ, ಅನ್ನೋದಕ್ಕಿಂತ ನಾವು ಪ್ರೀತಿಗೇನು ಕೊಟ್ಟೆವು ಅನ್ನೋದು ಮುಖ್ಯ ಅಲ್ವಾ ಸ್ನೇಹಿತರೆ , ನನ್ನ ಪ್ರೀತಿಗೆ ಮೋಸ ಆಗಿದೆ, ಅದಕ್ಕೆ ಈ ರೀತಿ ಹೇಳ್ತಾ ಇದೀನಿ ಅಂತ ನೀವು ಅಂದುಕೊಳ್ಳಬಹುದು , ಖಂಡಿತವಾಗಿಯೂ ಇಲ್ಲ.
ಇದರಲ್ಲಿ ನನ್ನ ತಪ್ಪೇನಿದೆ? ನೀವೇ ಹೇಳಿ ಪ್ರೀತಿ ಮಾಡೋದು ಸುಲಭ, ಆದ್ರೆ ಅದನ್ನ ಮರೆಯೋದು ನಿಜವಾಗಿಯೂ ಪ್ರೀತಿಸಿದ ಯಾರಿಂದಲೂ ಸಾದ್ಯವಿಲ್ಲ ಒಂದಲ್ಲ ಒಂದು ರೀತಿಯಲ್ಲಿ ಅವರು ನೆನಪಾಗುತ್ತಾರೆ.
ಮನಸಲ್ಲಿ ಒಬ್ಬರನ್ನು ಇಟ್ಟುಕೊಂಡು ಇನ್ನೊಬ್ಬರ ಜೊತೆ ಜೀವನ ಮಾಡೋದು ತುಂಬಾ ಕಷ್ಟ, ಸ್ನೇಹಿತರೆ ನಾನು ನಿಮಗೆಲ್ಲ ಹೇಳೋದು ಒಂದೇ ಮಾತು,ತ್ಯಾಗದ ಹೆಸರಲ್ಲಿ ಪ್ರೀತಿಗೆ ಮೋಸ ಮಾಡಬೇಡಿ, ಹಾಗಂತ ನಿಮ್ಮ ತಂದೆ ತಾಯಿಯ ಮಾತನ್ನು ವಿರೋದಿಸಿ ಅಂತಾನೂ ಅಲ್ಲ ಪ್ರೀತಿ ಮಾಡುವಾಗ ಹೇಗೆ ನೀವು ಕಾಡಿ ಬೇಡಿ ಒಪ್ಪಿಸುತ್ತಾರೋ ಹಾಗೆ ನಿಮ್ಮ ಮನೆಯವರ ಮನವೊಲಿಸಿ ನಿಮ್ಮ ಪ್ರಿತಿಯನ್ನು ಉಳಿಸಿಕೊಳ್ಳಿ.
ನನ್ನ ಹುಡುಗ ನನ್ನ ಪ್ರೀತಿನ ಅರ್ಥ ಮಾಡಿಕೊಳ್ಳಲಿಲ್ಲ ನಾನು ಎಲ್ಲರ ಹಾಗೆ ಬೇರೆಯವರನ್ನ ಮದುವೆ ಆಗ್ತೀನಿ ಅಂತ ತಿಳಿದುಕೊಂಡಿದ್ದಾನೆ, ಆದ್ರೆ ಅವನಿಗೇನು ಗೊತ್ತು ಅವನನ್ನೆ ನನ್ನ ಗಂಡ ಅನ್ನೋ ಸ್ಥಾನದಲ್ಲಿ ಇರಿಸಿದ್ದೀನಿ, ಅಂತ ಒಂದಂತೂ ನಿಜ.
ಈ ಹುಡುಗರು ಹುಡುಗಿಯರ ಬಗ್ಗೆ ಯೋಚನೆ ಮಾಡ್ತಾರೊ ಬಿಡ್ತಾರೋ ಗೊತ್ತಿಲ್ಲ, ಆದರೆ ಹುಡುಗಿಯರು ಹಾಗಲ್ಲ, ಕನ್ನಡಿ ಮುಂದೆ ನಿಂತಾಗ, ಓದುವಾಗ, ಬರೆಯುವಾಗ ಊಟ ಮಾಡುವಾಗ ಎಲ್ಲಾ ಸಮಯದಲ್ಲೂ ನೆನಪು ಮಾಡಿಕೊಳ್ಳತ್ತಾರೆ. ನನಗಂತೂ ನನ್ನ ಪ್ರೀತಿ ಸದಾ ನನ್ನ ಜೊತೆಯೇ ಇರುತ್ತದೆ.
ಈ ನನ್ನ ನಿರ್ದಾರದಲ್ಲಿ ಏನಾದರೂ ತಪ್ಪಿದಿಯಾ? ಗೆಳೆಯಾ ನಿನ್ನ ಸ್ಥಾನದಲ್ಲಿ ಬೇರೆ ಯಾರನ್ನೂ ನಾನು ನೋಡಕ್ಕೆ ಇಷ್ಟ ಪಡಲ್ಲ ಈ ವಿಚಾರ ನಿನಗೂ ಗೊತ್ತಿದೆ, ಅಂತ ನಾನು ಅಂದುಕೊಂಡಿದ್ದೇನೆ. ನಿನ್ನ ಮಟ್ಟಿಗೆ ನೀನು ಯೋಚನೆ ಮಾಡೋದು ಸರಿ ಇರಬಹುದು ನಿನ್ನ ನಿರ್ದಾರಕ್ಕೆ ಯಾವಾಗಲೂ ಬೇಡ ಅಂತ ಹೇಳಿಲ್ಲ, ನಿನ್ನ ಇಷ್ಟ ಗೆಳೆಯಾ, ಆದ್ರೆ ನಾ ನಿನಗಾಗಿ ಕಾಯ್ತಾ ಇರ‍್ತೀನಿ, ನನ್ನ ಕೊನೆ ಉಸಿರು ಇರುವ ತನಕ.
ಸ್ನೇಹಿತರೇ ನಿಮಗೆಲ್ಲಾ ಹೇಳೋದು ಒಂದೇ ಮಾತು ನಿಮ್ಮ ಪ್ರಿತಿ ಉಳಿಸಿಕೊಳ್ಳತ್ತೇವೆ, ಅನ್ನೋ ನಂಬಿಕೆ ನಿಮಗೆ ಬಂದ ಮೇಲೇನೆ ಪ್ರೀತಿ ಮಾಡಿ, ಇದರಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ನನಗೆ ಅನ್ನಿಸಿದ್ದನ್ನು ನಾನು ವ್ಯಕ್ತಪಡಿಸಿದೇನೆ ,
ಪ್ರೀತಿಯಿಂದ ದೂರವಾದ ಗೆಳತಿ,
ರೂಪ.ಎಸ್