Sunday, September 20, 2009

ನೀ ದುಡಿವ ಹಾದಿಯಲ್ಲಿ ನೂರೆಂಟು ಮುಳ್ಳುಗಳು!


ಹೆಣ್ಣು ಅಬಲೆಯಲ್ಲ, ಸಬಲೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾಳೆ, ಪುರುಷರಿಗೆ ಸರಿಸಮಾನಳಾಗಿ ಜವಾಬ್ದಾರಿಯನ್ನು ಹೊತ್ತಿದ್ದಾಳೆ ಎಂದು ಎಷ್ಟೇ ಬೊಗಳೆ ಹೊಡೆದುಕೊಂಡರೂ ವಸ್ತುಸ್ಥಿತಿ ತಿಳಿದಂತಿಲ್ಲ. ವಿಪರ್ಯಾಸವೆಂದರೆ, ಇರಿವ ಪುರುಷ ಕಂಗಳ ಮಧ್ಯೆ ಮಹಿಳೆ ಇನ್ನೂ ಹರಿಣಿಯಂತಿದ್ದಾಳೆ.

* ರೂಪ.ಎಸ್

ಇಂದಿನ ದುಬಾರಿ ದಿನಗಳಲ್ಲಿ ಮಹಿಳೆಯೂ ದುಡಿಯಬೇಕು, ಅದು ಅನಿವಾರ್ಯ. ನಾನು ದುಡಿದು ಕುಟುಂಬವನ್ನು ಸಾಕಬಲ್ಲೆ ಎನ್ನುತ್ತಾಳೆ ಅವಳು, ಅದು ಆತ್ಮ ವಿಶ್ವಾಸ. ಮನೆಯೊಡತಿ ಎಂಬ ಪಟ್ಟವನ್ನು ಇಂದಿನ ವಿದ್ಯಾವಂತ ಯುವತಿಗೆ ಇಷ್ಟವಾಗುವುದಿಲ್ಲ. ಮನೆಯಡತಿ ಎಂಬಾಕೆ ಗಂಡನ ಚಾಕರಿ, ಮಕ್ಕಳ ಪಾಲನೆ, ಕಸ ಮುಸರೆಯ ಆಳಾಗಿ ಜೀವನ ಸವೆಸಿರುವುದನ್ನು ಅವಳು ಕಣ್ಣಾರೆ ಕಂಡಾಕೆ ಸ್ವಾವಲಂಬನೆಯತ್ತಲೂ ಹೆಜ್ಜೆ ಇಟ್ಟಿದ್ದಾಳೆ.

ಸ್ವಾತಂತ್ರ್ಯ, ಸ್ವಾವಲಂಬನೆ ಹಾಗೂ ಸ್ವಾಭಿಮಾನದತ್ತ ದಿಟ್ಟ ಹೆಜ್ಜೆ ಇಟ್ಟಿರುವ ಅನೇಕ ಮಹಿಳೆಯರು ಪಟ್ಟು ಹಿಟಿದು ಪದವಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗುತ್ತಿದ್ದಾರೆ. ಕೆಲಸ ಮಾಡಲೇಬೇಕೆಂದು ಹಟಕ್ಕೆ ಬಿದ್ದು ಹತ್ತಾರು ಕಂಪನಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರ ಶ್ರಮ, ಶ್ರದ್ದೆ, ಜಾಣ್ಮೆ ಮತ್ತು ಪ್ರಾಮಾಣಿಕತೆಗೆ ಉದ್ಯೋಗವೂ ಸಿಗುತ್ತಿವೆ. ಆದರೆ, ಈ ವನಿತೆಯರ ದುಡಿವ ಹಾದಿಯ ಮುಂದಿನ ಪಯಣ ಅದೆಷ್ಟು ಸುರಕ್ಷಿತ?

ತಾವು ಸಂತೃಪ್ತರು ಎಂದು ಹೇಳಿಕೊಳ್ಳುವ ಎಷ್ಟೋ ಮಹಿಳೆಯರು ಸಹೋದ್ಯೋಗಿಗಳ ಜತೆ ಉಸಿರು ಹಿಡಿದು ಹೆಣಗಾಡುತ್ತಿದ್ದಾರೆ. ಆದರೆ, ಪ್ರೀತಿಸಿ ಕೈ ಹಿಡಿದ ಪತಿಗೆ ಅವಳಿಗಿಂತ ಅವಳ ಸಂಬಳದ ಮೇಲೆಯೇ ಹೆಚ್ಚು ಪ್ರೀತಿ, ಮಕ್ಕಳ ಮನಸ್ಸಿನಲ್ಲಿ ಇವಳೇ ಮಲತಾಯಿ, ಬಂಧುಗಳ ದೃಷ್ಟಿಯಲ್ಲಿ ಗರ್ವಿಷ್ಠೆ ಎಂಬ ಅವಪೇಕ್ಷಿತ ಪದವಿಗಳು ಕುಟುಕುವುದು ತಪ್ಪುತ್ತಿಲ್ಲ. ಇಷ್ಟು ಸಾಕಲ್ಲ ಉದ್ಯೋಗಸ್ಥಮಹಿಳೆ ಕುಸಿಯಲು?

ದುಡಿಯುವ ಅಬಲೆಯರು

ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹೊರಟ ಎಷ್ಟೋ ಮಹಿಳೆಯರು ಈಗಾಗಲೇ ಕಾಲಲ್ಲಿ ಶಕ್ತಿ ಕಳೆದುಕೊಂಡವರಂತೆ ಹೈರಾಣಾಗಿದ್ದಾರೆ ಎನ್ನುವ ಅಘಾತಕಾರಿ ಸತ್ಯವನ್ನು ಜಾಗತಿಕ ಮಹಿಳಾ ಒಕ್ಕೂಟ ಬಯಲು ಮಾಡಿದೆ. ಉದ್ಯೋಗಸ್ಥ ಮಹಿಳೆಯರ ಸ್ಥಾನಮಾನ ಮತ್ತು ಮಾನಸಿಕ ಸ್ಥಿರತೆ ಕುರಿತಂತೆ ಈ ಒಕ್ಕೂಟ ಜಗತ್ತಿನ ಪ್ರಬಲ 18 ರಾಷ್ಟ್ರಗಳಲ್ಲಿ ಸುಮಾರು ಎರಡು ತಿಂಗಳ ಕಾಲ ಅಧ್ಯಯನ ನಡೆಸಿದ ಬಳಿಕ ತನ್ನ ವರದಿಯನ್ನು ಬಹಿರಂಗ ಮಾಡಿದ್ದು, ಮಹಿಳೆಯರ ಬಗೆಗಿನ ಅಭಿಪ್ರಾಯಗಳು ಈ ಪುರುಷ ಪ್ರಾಬಲ್ಯದ ಸಮಾಜದಲ್ಲಿ ಇನ್ನೂ ಬದಲಾಗಿಲ್ಲ ಎನ್ನುವುದನ್ನು ಎತ್ತಿ ಹೇಳಿದೆ.

ತಾವು ಅತ್ಯಂತ ಮುಂದುವರೆದವರು, ಪ್ರಗತಿಪರರು ಮತ್ತು ಲಿಂಗ ಸಮಾನತೆಗೆ ಒತ್ತು ಕೊಡುವವರು ಎಂದು ಬೆನ್ನು ತಟ್ಟಿಕೊಳ್ಳುವ ರಾಷ್ಟ್ರಗಳಲ್ಲೂ ದುಡಿವ ಮಹಿಳೆ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆ, ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. ತನಗಾರೂ ಇಲ್ಲ, ತಾನು ಅಸಹಾಯಕಳು ಎನ್ನುವ ಅತಂತ್ರತೆ ಅವಳನ್ನು ಕಾಡುತ್ತಿದೆ! ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಹವಣಿಸುತ್ತಿರುವ ರಾಷ್ಟ್ರಗಳ ಕಥೆಯೂ ಇದೇ ರೀತಿಯದ್ದು, ಅಲ್ಲಿನ ಬಹುತೇಕ ಪತಿ ಮಹಾಶಯರು ತಮ್ಮ ಉದ್ಯೋಗಸ್ಥ ಪತ್ನಿಯರ ಬಗ್ಗೆ "ನಾನಾಗಿಯೇ ಅವಳಿಗೆ ನೀಡಿದ ಸ್ವಾತಂತ್ರ್ಯ ನಾನು ತೋರುತ್ತಿರುವ ದಯೆ" ಎನ್ನುವ ಭಾವನೆಯಲ್ಲಿದ್ದಾರೆ.

ತಪ್ಪುಗಳಿಗೆ ಇವಳೇ ಹೊಣೆ

ಉದ್ಯೋಗಸ್ಥ ಮಹಿಳೆಯನ್ನು ಅಳತೆ ಮಾಡುವ ದೃಷ್ಟಿಕೋನ ಬೇರೆ ಬೇರೆಯಾಗಿದ್ದರೂ ಹಿಂದೆ ಇರುವುದು ಮಾತ್ರ ಪೂರ್ವಗ್ರಹ ಪೀಡಿತ ಪುರುಷ ಮನಸ್ಸು ಅಷ್ಟೇ ಎನ್ನುತ್ತಿದೆ ವರದಿ. ಗಂಡ ಹಾದಿ ತಪ್ಪಿದರೆ ನಿನ್ನ ಪತಿಯನ್ನು ನೀನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅದಕ್ಕಾಗಿ ಅವನು ಹಾಳಾಗಿದ್ದಾನೆ ಎಂದು ಅವಳನ್ನು ಹೊಣೆ ಮಾಡಲಾಗುತ್ತಿದೆ. ಮಕ್ಕಳು ದಡ್ಡರಾದರೂ ಗೂಬೆ ಇವಳ ತಲೆಗೆ, ಇನ್ನು ವೃದ್ದ ಅತ್ತೆ -ಮಾವಂದಿರ ಸೇವೆಗೆ ಇವಳೆ ಆಗಬೇಕಂತೆ. ಇಲ್ಲದಿದ್ದರೆ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾಳೆ, ತಮ್ಮ ರೋಗ ಉಲ್ಬಣಕ್ಕೆ ಇವಳೇ ಕಾರಣ ಎನ್ನುವುದು ಅವರ ಆರೋಪ.

ಬಂಧುಗಳ ದೃಷ್ಟಿಯಲ್ಲೂ ಇವಳು ವಿಭಿನ್ನಳಾಗಿಲ್ಲ. ಕೆಲಸಕ್ಕೆ ಹೋಗುವ ಅವಸರದಲ್ಲಿ ಅವರನ್ನು ಸರಿಯಾಗಿ ಉಪಚರಿಸಲಿಕ್ಕೆ ಆಗದಿದ್ದರೆ ಊರೆಲ್ಲ ಟಾಂಟಾಂ ಹೊಡೆದು ಇವಳನ್ನು ಕಾರಣೀಬೂತಳನ್ನಾಗಿ ಮಾಡುತ್ತಾರೆ. ಮನೆಗೆಲಸಕ್ಕೆ ಪುರುಷ ಅರ್ಹನಲ್ಲ. ಅದೇನಿದ್ದರೂ ಮಹಿಳೆಯ ಜವಾಬ್ದಾರಿ ಎನ್ನುವ ಸಾರ್ವಕಾಲಿಕ ತೀರ್ಪಿಗೆ ಎಲ್ಲ ರಾಷ್ಟ್ರಗಳು ಬದ್ದವಾದಂತಿದೆ ಹಾಗಾಗಿ ಅವಳು ಉದ್ಯೋಗಸ್ಥ ಮಹಿಳೆಯಾಗುವುದನ್ನು ಮನಃ ಪೂರ್ವಕವಾಗಿ ಯಾರೂ ಒಪುವುದಿಲ್ಲ ಎನ್ನುತ್ತಿದೆ ಒಕ್ಕೂಟದ ವರದಿ.

ಇರಿವ ಕಂಗಳ ಮದ್ಯೆ

ಹೊರಗಿನ ಪ್ರಪಂಚದ ಏನೆಲ್ಲಾ ವೈರುದ್ಯ, ವರಾತಗಳನ್ನು ಅವುಡುಗಚ್ಚಿ ಸಹಿಸಿ ಉದ್ಯೋಗಕ್ಕೆ ಬರುವ ಇವಳ ಕಚೇರಿ ವಾತಾವರಣ ಇನ್ನೂ ಭಯಾನಕ. ಇರಿವ ಕಂಗಳ ಮಧ್ಯೆ ಇವಳೊಬ್ಬ ಹರಿಣಿ! ಅವಳು ತೊಡುವ ಬಟ್ಟೆ. ತುಟಿಗೆ ಹಚ್ಚಿದ ಲಿಪ್ ಸ್ಟಿಕ್ , ಉಬ್ಬು ತಗ್ಗಿನ ಅಂಗ ಸೌಷ್ಟವ, ನೋಟದಲ್ಲಿನ ಚಂಚಲತೆ ಮತ್ತು ಅವಳು ಮತ್ತೊಬ್ಬರೊಂದಿಗೆ ಹೊಂದುವ ಸಲುಗೆಯ ಬಗ್ಗೆಯೇ ಕಚೇರಿಯಲ್ಲಿ ಹೆಚ್ಚು ಚರ್ಚೆಯಾಗುತ್ತದೆಯೇ ವಿನಃ ಅವಳ ಪ್ರತಿಭೆ, ಶ್ರಮ ಮತ್ತು ಸಾಧನೆ ಅಲ್ಲ ಎನ್ನುವುದನ್ನು ವರದಿ ಸ್ಪಷ್ಟಪಡಿಸಿದೆ.

ದುಡಿವ ಕಚೇರಿಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂದು ಸುಮ್ಮನೆ ಇದ್ದರೆ ಅವಳ ತಪ್ಪುಗಳ ಹುಡುಕುವವರ ಮತ್ತು ಅವಳು ದಡ್ಡಿ ಎನ್ನುವ ಪಟ್ಟ ಕಟ್ಟುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಸೋಷಿಯಲ್ ಆಗೋಣವೆಂದರೂ ಪ್ರತಿಯೊಬ್ಬ ಸಹೋದ್ಯೋಗಿಯ ಮನಸ್ಸಿನಲ್ಲೂ ಚಿತ್ತ ಚಿತ್ತಾರ. ನಗುವೆ ಮುಳುವು, ಹರಟೆಯೇ ಹೊಂಡ, ಈ ದುಡಿವ ಹಾದಿಯಲ್ಲಿ ನೂರೆಂಟು ಕಲ್ಲು-ಮುಳ್ಳುಗಳು, ನೋವು ಕೊಡುವವರೇ ಅಧಿಕ. ನೆರವಿಗೆ ಬರುವ ಹಸ್ತಗಳು ಬಹು ಕಿರಿದು! ಮಹಿಳಾ ಸಾಧನೆಯ ನಿರ್ದಶನಕ್ಕೆ ಕಲ್ಪನಾ ಚಾವ್ಲಾ, ಕಿರಣ ಬೇಡಿ, ಮದರ್ ತೆರೆಸಾ ಅವರನ್ನು ಹೆಸರಿಸುವ ಜಗತ್ತು, ನಿತ್ಯ ಸಾಯುವ ಕೋಟಿ ಕೋಟಿ ಉದ್ಯೋಗಸ್ಥರ ಬಗ್ಗೆ ಹೇಳುವುದೇ ಇಲ್ಲ.

No comments:

Post a Comment