Sunday, September 20, 2009

ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದೆ... !


ನಾನೇ ಕಣೋ,ನಿನ್ನಿಂದ ನಗುವಿನ ಪಾಠ ಕಲಿತ ಸಂಕಟಗಳ ಒಡತಿ,ನನ್ನ ನಲಿವಿಗೆ ಗುರುವಾಗಿದ್ದ ನೀನೆ ಇವತ್ತು ಒಂದು ಅಗಾಧ ನೋವಿಗೆ ಕಾರಣವಾಗಿದ್ದೀಯ, ಈವರೆಗೂ ಮನಸ್ಸಿಗೆ ಇಷ್ಟೇ ಇಷ್ಟು ಬೇಸರವಾದರೂ ನಿನ್ನ ನೆನಪಾಗ್ತಿತ್ತು, ತಕ್ಷಣವೇ ನಿನ್ನಲ್ಲಿ ಹೇಳಿ ಹಗುರವಾಗ್ತಿದ್ದೆ, ಆದರೆ ಈಗ ಯಾರ ಬಳೀ ಹೇಳಲಿ ? ಅಸಲು ನೀನು ನನಗೆ ವರ್ಷಾನುವರ್ಷಗಳ ಗೆಳಯನೇನಲ್ಲ, ಕೆಲವೇ ತಿಂಗಳುಗಳ , ಹಿಂದೆ ಯಾವೂದೋ ನಾಲ್ಕು ಸಾಲಿನ ಲೇಖನ ನೋಡಿ ನನ್ನ ಸೆಲ್ ಗೊಂದು ಪುಟ್ಟ ಸಂದೇಶ ಕಳಿಸಿ, ನಗುವಿನ ಹೊಳೆ ಹರಿಸಿ ಪರಿಚಯನಾದವನು, ನೋಡ ನೋಡುತ್ತಲೇ ಕೆಲವೇ ದಿನಗಳಲ್ಲಿ ಆತ್ಮ ಬಂಧುವಾದೆ!

ಹೌದಲ್ವೆನೋ , ಮೊನ್ನೆ ತನಕ ನಾವಿಬ್ಬರೂ ಮುಖತಃ ಭೇಟಿಯಾಗಿರಲಿಲ್ಲ ನೀನು ಹೀಗೆ ಇರಬಹುದಾ ? ಅನ್ನೋ ಸಣ್ಣ ಕಲ್ಪನೆ ಕೂಡ ನನಗಿರಲಿಲ್ಲ, ಆದರೂ ನಿನ್ನೊಂದಿಗೆ ಆಡಿದ ಮಾತುಗಳಷ್ಟು..? ಹಂಚಿಕೊಂಡ ನೋವಿನ ಕಥೆಗಳೆಷ್ಟು ....? ಯಾವತ್ತೂ ಯಾರ ಮುಂದೆಯೂ ಕಣ್ಣೀರಾಗದ ನಾನು ನಿನ್ನದೆದುರು ಕಣ್ಣೀರ ಕಡಲಾಗ್ತೀನಲ್ಲ ಯಾಕೆ ? ಸಿಂಪಥಿಗಾ ? ಸಮಾಧಾನಕ್ಕಾ ? ನಂಗೂ ಗೊತ್ತಿಲ್ಲ ಕಣೋ, ಒಂದು ಮಾತ್ರ ನಿಜ, ನಿನಗೆ ಪರಿಶುದ್ಧ ಮನಸ್ಸಿದೆ, ಅದರಲ್ಲಿ ಅಮ್ಮನ ಪ್ರೀತಿಯಿದೆ. ಆ ದೇವರಂತ ಪ್ರೀತಿಗೆ ಈ ಮನಸ್ಸು ಸುಮ್ಮನೆ ಹಂಬಲಿಸುತ್ತಿದೆ.

ನನಗಿಂತ ನಿನಗೆ ಚೆನ್ನಾಗಿ ಗೊತ್ತಿದೆ ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೀನಿ ಅಂತ, ನೀನು ನನಗೆ ಕೇವಲ ಗೆಳೆಯನೆ ಪ್ರೀತಿಯ ಪ್ರತಿರೂಪವೆ? ನಿನ್ನಡೆಗೆ ನನಗಿರುವುದು ಆಕರ್ಷಣೆಯಾ? ಪ್ರೀತಿಯ ? ಇದ್ಯಾವುದನ್ನೂ ಯೋಚಿಸದೆ. ಅದೊಂದು ಮುಂಜಾನೆ... ನಿನ್ನ ಬದುಕಿಗೆ ನನ್ನನ್ನು ಬರಮಾಡಿಕೊಳ್ಳುತ್ತೀಯಾ..? ಅಂತ ಕೇಳಿದವಳು ನಾನು , ಇವತ್ತಿಗೂ ಹಾಗೆ ಕೇಳಿದ್ದು ಸರಿಯಾ ? ತಪ್ಪಾ? ಗೊತ್ತಿಲ್ವೊ ಆ ನನ್ನ ವಿನಂತಿಯನ್ನು ನೀನು ಒಪ್ಪಿಕೊಂಡೆಯಾ? ತಿರಸ್ಕರಿಸಿದ್ಯಾ ? ತಿಳಿಯಲಿಲ್ಲ. ಆದರೂ ಭಾವನೆಗಳ ಜತೆ ನಾನು ಬಾಂಧವ್ಯ ಬೆಳೆಸಿದೆ. ವಾಸ್ತವ ಮರೆತು ಕಲ್ಪನೆಗಳ ಬೆನ್ನತ್ತಿದೆ . ಇದೆಲ್ಲವನ್ನೂ ತಿಳಿದ ನೀನು ನನ್ನ ಮನದ ಬೆಚ್ಚನೆಯ ಪ್ರೀತಿಯನ್ನು ಬಿರುಸಾಗಿ ತಿರಸ್ಕರಿಸಿದೆ ಅದನ್ನು ಕಾಲದ ಪರಿಧಿಗೆ ಕೊಟ್ಟು ಸುಮ್ಮನಾದೆ.

ನೀನು ಸುಮ್ಮನಿದ್ದುದನ್ನು ಒಲವ ಒಪ್ಪಿಗೆ ಅಂದುಕೊಂಡೆನಾ? ಉಹುಂ.ಗೊತ್ತಿಲ್ಲ ಕಣೋ..ಎಷ್ಟೇ ಆದರೂ ನೀನು ದೇವರಂಥ ಹುಡುಗನಲ್ಲಾ? ನನ್ನ ಮನಸ್ಸು ನಿನಗೆ ತಿಳಿದೇ ಇದ್ದಿತಾ? ಎಷ್ಟು ಜಾಗ್ರತೆ ವಹಿಸಿ ಪ್ರೀತಿಯೆಂಬ ಕಾನನದಿಂದ ಸ್ನೇಹದ ಊರಿಗೆ ಕರೆತಂದೆ ಅಲ್ವಾ? ನಿನಗೆ ಸ್ನೇಹಿತನಾಗಿ ಇರಬಲ್ಲೆ" ಎಂಬ ನಿನ್ನ ಮಾತು ತಡವಾಗಿ ಏನೂ ನನ್ನ ತಲುಪಿಲ್ಲ! ಅವತ್ತಿನ ನನ್ನ ಆಕ್ರಂದನವನ್ನು ನೋಡಿ ಬದುಕು ಗಹಗಹಿಸಿತ್ತು. ವಿಧಿ ವಿಲಕ್ಷಣವಾಗಿ ನಕ್ಕಿತ್ತು ನಿಜ. ಕಣೋ, ಇಷ್ಟು ವರ್ಷದ ಈ ಅವಧಿಯಲ್ಲಿ ಯಾವತ್ತಿಗೂ ನಂಗೆ ಹೀಗೆಲ್ಲ ಅನ್ನಿಸಲಿಲ್ಲ...

ಈ ಪುಟ್ಟ ಬದುಕನ್ನು ಮತ್ತೊಬ್ಬರ ಜತೆ ಹಂಚಿಕೊಳ್ಳೊ ಕನಸು ಕಂಡಿರಲಿಲ್ಲ. ಅದ್ಯಾಕೋ ನಿನ್ನ ಒಡನಾಟದ ಜತೆ ಜತೆಯಲಿ ಸಾಗೋ ಅದಮ್ಯ ಆಸೆ ನನ್ನದಾಗಿತ್ತು. ಪ್ರೀತಿಯಲ್ಲಿ ತಿರಸ್ಕರಿಸಿದರೂ ಸ್ನೇಹಿತರಾಗಿ ಉಳಿತೀನಿ ಅಂತ ಪ್ರಮಾಣ ಮಾಡಿದ್ದೆ ಮತ್ತು ನೀನು ಮಾತಿಗೆ ತಪ್ಪುವವನಲ್ಲ ಅಲ್ವಾ? ಆ ಕಾರಣಕ್ಕೆ ನನ್ನ ಮನದ ಅಷ್ಟು ಭಾವನೆಗಳನ್ನು ಸಮಾಧಿ ಮಾಡಿ ನಿನ್ನ ಸ್ನೇಹಕ್ಕೆ ಮನಸ್ಸು ಒಪ್ಪಿಸಿದ್ದೆ.... ಆದರೀಗ ಆ ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದಂತಿದೆ. ಇತ್ತೀಚಿನ ನಿನ್ನ ನಡವಳಿಕೆ ಮನಸ್ಸನ್ನ ಭೀತಿಗೊಳಿಸಿದೆ ಕಣೋ....

ಮೊದಲೆಲ್ಲಾ ನನ್ನ ಪ್ರತಿ ಸಂಕಟಕ್ಕೂ ಸಾಂತ್ವನದ ಮಡಿಲಾಗ್ತಿದ್ದ. ನೀನು ಈಗ ಗದರಿಕೆಯ ಮಾತುಗಳನ್ನು ಆಡ್ತಾ ಇದ್ದೀಯ ! ಕೇಳಿದರೆ ಮತ್ತಷ್ಟು ಒರಟಾಗ್ತೀಯ ಆತ್ಮೀಯತೆಯ ಕಡಲಲ್ಲಿ ಅಸಮಾಧಾನದ ಅಲೆಗಳು ಅಬ್ಬರಿಸ್ತಿವೆ, ಯಾಕೋ ಹೀಗೆಲ್ಲಾ ಆಗ್ತಿದೆ? ನಿಜಕ್ಕೂ ನೀನು ಬದಲಾಗಿದ್ದೀಯ ? ಆಥ್ವಾ ನಾನೇ ನಿನ್ನನ್ನು ತಪ್ಪು ತಿಳಿದಿದ್ದೀನಾ ? ನಿನ್ನ ಅಂಗೈಯ ಕಿರುಬೆರಳು ಹಿಡಿದು ಸ್ನೇಹದ ಪಯಣ ಬೆಳೆಸೋ ನನ್ನ ಪುಟ್ಟ ಆಸೆ ತಪ್ಪಾ ? ಉತ್ತರವಿಲ್ಲದ ಈ ಎಲ್ಲಾ ಪ್ರಶ್ನೆಗಳಿಗೂ ಖುದ್ದು ನಿನ್ನಿಂದಲೇ ಉತ್ತರಬೇಕಿದೆ ನೀನು ಸ್ನೇಹದಿಂದಲೂ ದೂರವಾಗ್ತಾ ಇದ್ದೀಯ ಎಂಬ ನನ್ನ ಮನದ ಆತಂಕವನ್ನು ಸುಳ್ಳು ಮಾಡಲು ಒಮ್ಮೆ ಭೇಟಿ ಯಾಗು.. ...!

ಇಂತಿ ನಿನ್ನ ದೂರವಾದ ಆಪ್ತಗೆಳತಿ...?
ರೂಪ.ಎಸ್

1 comment:

  1. ಭಾವನೆಗಳನ್ನು ಪದಗಳಲ್ಲಿ ಬಿಡಿಸಿಡುವುದೆಂದರೆ ಇದೇನಾ..?
    ಉತ್ತಮ ಲೇಖನ.

    ReplyDelete