Sunday, September 13, 2009

ಹಲೋ... ನಿಮ್ಮನ್ನೇ ಕೇಳ್ತಿರೋದು ಹಳೆ ಗೆಳತಿ ಸಿಕ್ಕಿದ್ಳಾ?


ಒಂದು ಮುಗುಳ್ನಗು, ತೊಟ್ಟು ಕಣ್ಣೀರು, ಮೆಲುವಾದ ಮಾತು, ನೆನಪಿನ ಬುಗ್ಗೆ, ಬರ್ತಿಯಾ ಮನೆಗೆ ಅನ್ನುವ ಆತ್ಮೀಯ ಆಹ್ವಾನ... ಒಹ್... ಆ ಹಳೇ ಗೆಳತಿ ಸಿಕ್ಕಾಗ ಕಾಲು ನೆಲದ ಮೇಲಿರುವುದಿಲ್ಲ, ಮನಸು ಹಕ್ಕಿಯಾಗದೆ ಉಳಿಯುವುದಿಲ್ಲ... ಆ ಮಾಂತ್ರಿಕ ಶಕ್ತಿ ಆ ಗೆಳೆತನದ ಬಾಂಧವ್ಯದಲ್ಲಿದೆ. ಅಂದ ಹಾಗೆ, ನೀವೆಂದಾದರೂ ಹಳೆ ಗೆಳತಿಯನ್ನು ಹುಡುಕಿ ಹೋಗಿದ್ದಿರಾ? ಹಳೆ ಗೆಳತಿಯ ನೆನಪಾದರೂ ಇದೆಯಾ?
* ರೂಪ.ಎಸ್

ಬೆಳಿಗ್ಗೆ ಏನು ತಿಂಡಿ ಮಾಡಬೇಕು, ಮಧ್ಯಾಹ್ನ ಏನು ಅಡುಗೆ ಮಾಡಬೇಕು ಎಂಬ ಚಿಂತೆಯೇ? ಇಲ್ಲಿ ಕೇಳಿ, ನನ್ನ ಒಂದೇ ಒಂದು ಪ್ರಶ್ನೆಗೆ ನೀವು ಉತ್ತರಿಸಲೇಬೇಕು. ಎಲ್ಲಿ ನಿಮ್ಮ ಹೈಸ್ಕೂಲ್ ಸ್ನೇಹಿತರ ಹೆಸರನ್ನು ಹೇಳಿ ನೋಡೋಣ. ಹೋಗಲಿ ಕಾಲೇಜಿನ ಗೆಳತಿಯಾರಾದರೂ ನಿಮಗೆ ನೆನಪಿದೆಯೇ? ನಿಮ್ಮ ಮದುವೆಗೆ ಬಂದಿದ್ದ ಫ್ರೆಂಡ್ಸ್ ಸಂಪರ್ಕ ಇನ್ನೂ ಇದೆಯೇ? ಯಾವಾಗಲಾದರೊಮ್ಮೆ ಮದುವೆಯ ಆಲ್ಬಂ ನೋಡಿದಾಗ, ಮದುವೆಯ ಸಿಡಿ ನೋಡಿದಾಗ ಅವರೆಲ್ಲಾ ನಿಮಗೆ ನೆನಪಾಗಬಹುದಲ್ಲದೆ?
ನಿಮ್ಮ ಗಂಡ ಅವರ ಮಿತ್ರರನ್ನು"ಇವನು ನನ್ನ ಚಡ್ಡಿ ದೋಸ್ತ್. ನಾನು ಇವನು ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು"... ಎಂದೆಲ್ಲಾ ಹೇಳುವಾಗ ನಿಮಗೆ ನಿಮ್ಮ ಪ್ರಾಕ್ ದೋಸ್ತ್ ನೆನಪಾಗುವುದಿಲ್ಲವೇ? ಕುಂಟೆಬಿಲ್ಲೆಗೆ ಜೊತೆಯಾಗುತ್ತಿದ್ದವಳು,"ಅವನು ನನ್ನೇ ನೋಡುತ್ತಾನೆ, ಎಂದು ನಿಮ್ಮಲ್ಲಿ ಮಾತ್ರ ಪಿಸುಗುಟ್ಟಿದ್ದವಳು, ಅವನು ಏನೇನೋ ಬರೆದಿದ್ದಾನೆ, ನನಗೆ ಭಯಾಗುತ್ತೆ ಎಂದು ತನ್ನ ಮೊದಲ ಪ್ರೇಮ ಪತ್ರವನ್ನು ತೋರಿಸಿದವಳು", ನನಗೆ ಮದುವೆ ಸೆಟ್ ಆಯಿತು ಎಂದು ಲಗ್ನ ಪತ್ರಿಕೆ ಕೊಟ್ಟವಳು, ಮನೆಯವರ ವಿರುದ್ದ ಸಿಡಿದೆದ್ದು ಪ್ರಿಯಕರನ ಜೊತೆ ಓಡಿ ಹೋದವಳು, ನಿನ್ನ ಮದುವೆಗೆ ಬಂದು ನಿನ್ನ ಪಾರ್ಟ್‌ನರ್ ಚೆನ್ನಾಗಿದ್ದಾನೆ ಕಣೇ ಎಂದು ಕಣ್ಣಲ್ಲೇ ಸನ್ಹೆ ಮಾಡಿದಳು ಎಲ್ಲರೂ ನಿಮಗೆ ನೆನಪಿರಬೇಕಲ್ಲಾ?
ಮದುವೆ ಆಯಿತು, ಅತ್ತೆಯನ್ನು ಮೆಚ್ಚಿಸುವ ಭರದಲ್ಲಿ, ಗಂಡನನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ಮಕ್ಕಳ ಬೇಡಿಕೆ ಪೂರೈಸುವ ಕರ್ತವ್ಯದಲ್ಲಿ ನೀವು ನಿಮ್ಮನ್ನೆ ಮರೆತುಬಿಟ್ಟಿದ್ದೀರಾ? ನಿಮ್ಮ ಮನದ ಸುತ್ತ ಬರೀ ಗಂಡ, ಮಕ್ಕಳು, ಮನೆ ಇವಿಷ್ಟೆಯೇ? ನಿಮ್ಮ ಇಷ್ಟದ, ಬಾಲ್ಯದ ನಿಮ್ಮ ಯೌವನದ ಜೊತೆಗಾರರು ನಿಮಗೆ ಬೇಡವೇ? ಅವರನ್ನು ಮರೆತಿರಿ ಹೇಗೆ?
ಹಳೇ ಸಿನಿಮಾಗಳಲ್ಲಿ, ಕಥೆ ಕಾದಂಬರಿಗಳಲ್ಲಿದ್ದಂತೆ ಜೀವದ ಗೆಳತಿ ಮದುವೆಯಾಗಿ ಹೋದ ನಂತರ, ಆ ಗೆಳತಿಯನ್ನು ನೋಡುವ ಭಾಗ್ಯ ಒದಗಿಬರುತ್ತದೋ ಇಲ್ಲವೋ ಎಂದು ಕಂಗಾಲಾಗುವ ಕಾಲವಲ್ಲವೇ ಅಲ್ಲ ಇದು. ನಿಮ್ಮ ಗೆಳತಿ ಎಲ್ಲೇ ಇರಲಿ ಅವಳೊಂದಿಗೆ ನೀವು ಸಂಪರ್ಕ ಬೆಳೆಸಬಹುದು ಮೊಬೈಲ್ ಇದೆ, ಇಂಟರ್‍ನೆಟ್ ಇದೆ. ಬೆರಳ ತುದಿಯಲ್ಲೇ ಸಂಪರ್ಕ ಸಾಧಿಸಬಹುದು. ಹೀಗಿದ್ದರೂ ನೀವು ಏಕೆ ಅವರುಗಳ ಸಂಪರ್ಕ ಇಟ್ಟು ಕೊಂಡಿಲ್ಲ? ಏಕೆ ನೀವು ನಿಮ್ಮ ಆಪ್ತ ಸ್ನೇಹಿತರನ್ನು ನಿಮ್ಮ ಮನೆಗೆ ಅಹ್ವಾನಿಸುವುದಿಲ್ಲ? ನಿಮ್ಮ ಸ್ನೇಹಿತರವರ ಮನೆಗೆ ಕರೆದರೆ ನೀವು ಏಕೆ ಹೋಗುವುದಿಲ್ಲ?
ಮದುವೆಯಾದ ಮೇಲೆ ಎಲ್ಲಾ ಜವಾಬ್ದಾರಿಗಳು ಹೊರುವುದು ಎಂದು ಎಲ್ಲಾ ಹೆಣ್ಣು ಮಕ್ಕಳು ತಿಳಿದಿರುತ್ತಾರೆ ಮತ್ತು ಹಾಗೆಯೇ ಅದನ್ನು ಒಪ್ಪಿಕೊಂಡಿರುತ್ತಾರೆ. ಆದರೆ ಅಷ್ಟಕ್ಕೆ ನಿಮ್ಮ ಮನವನ್ನು ಸಂಕುಚಿತಗೊಳಿಸಿಕೊಳ್ಳಬೇಡಿ. ಕಾಲ್ಪನಿಕ ಟಿವಿ ಧಾರವಾಹಿಗಳ ಪಾತ್ರಗಳಲ್ಲೇ ನಿಮ್ಮನ್ನು ಕಾಣಲು ಪ್ರಯತ್ನಿಸಬೇಡಿ. ನಮ್ಮ ಜೀವನ ಕೇವಲ 20 ನಿಮಿಷಗಳ ಕಾಲ ಪ್ರಸಾರವಾಗುವ ದೈನಂದಿನ ಧಾರವಾಹಿಗಳಲ್ಲ. ಅಡುಗೆಮನೆಯಾಚೆಯೂ ಜೀವನವಿದೆ. ಧಾರಾವಾಹಿಗಳಾಚೆಯೂ ಭಾವನೆಗಳಿವೆ.ನನ್ನ ಮಗ ಸ್ಪೋರ್ಟ್ಸ್ ನಲ್ಲಿ ಫಸ್ಟ್, ಮಗಳು ಡ್ಯಾನ್ಸ್ ನಲ್ಲಿ ಮುಂದು, ಗಂಡನಿಗೆ ಪ್ರಮೋಷನ್ ಸಿಕ್ಕಿತು ಎಂದೋ ಅಥವಾ ನನ್ನ ಮಗ ಓದುವುದರಲ್ಲಿ ಹಿಂದೆ ಬಿದ್ದಿದ್ದಾನೆ, ಏನು ಮಾಡುವುದು ಮಗಳಿಗೆ ಸರಿಯಾದ ಸ್ಕೂಲಿಗೆ ಸೀಟ್ ಸಿಗುತ್ತಿಲ್ಲ, ಗಂಡನ ಕೆಲಸ ಪರವಾಗಿಲ್ಲ, ನಾನು ಏನಾದರೂ ಕೆಲಸ ಮಾಡಬಹುದೇ ನನ್ನ ಆರೋಗ್ಯ ಯಾಕೋ ಸರಿಯಾಗಿಲ್ಲ. 2 ಮಕ್ಕಳಾದ ಮೇಲೆ ನಾನೇನೋ ಕುಗ್ಗಿ ಹೋಗಿದ್ದೇನೆ. ಮನೆ ಸಾಲ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ನಿಮ್ಮ ಬೆಳೆದ ಮಗನ ಕುರಿತು ಸೊಸೆ ಅಳಿಯನ ಬಗ್ಗೆ...
ಹೀಗೆ ನಿಮ್ಮ ನೋವು ನಲಿವು ಸುಖ ದುಃಖದ ಕ್ಷಣಗಳ ಬಗ್ಗೆ ನಿಮ್ಮ ಗೆಳತಿಯರಲ್ಲಿ ಮನಬಿಚ್ಚಿ ಹಂಚಿಕೊಳ್ಳಿ. ಒಬ್ಬೊಬ್ಬರದೂ ಒಂದೊಂದು ಬಗೆಯ ಜೀವನ, ಒಬ್ಬೊಬ್ಬರದೂ ನವನವೀನ ಕಥೆ, ಒಬ್ಬೊಬ್ಬರ ಜೀವನವೂ ಕಲಿಸುವ ಪಾಠ. ಅದರಿಂದ ನಮ್ಮ ಜೀವನಕ್ಕೂ ಹೊಸ ಸೆಲೆ ಸಿಗಬಹುದು, ಅವರಿಗೂ ರೆಕ್ಕೆಬಿಚ್ಚಿ ಹಾರಾಡುವ ಉಮೇದು ಬರಬಹುದು.
ಅದಕ್ಕೇ ಸ್ನೇಹವನ್ನು ಉಳಿಸಿಕೊಳ್ಳಿ ಬೆಳೆಸಿಕೊಳ್ಳಿ. ಇವತ್ತು ನೀವು ನಿಮ್ಮ ಕೆಲಸವೆಲ್ಲಾ ಮುಗಿದ ಮೇಲೆ ಮಾಡಬೇಕಾದ ಮೊದಲ ಕೆಲಸ ಎಂದರೆ, ನಿಮಗೆ ನೆನಪಿರುವ ಎಲ್ಲಾ ಗೆಳತಿಯರ ಹೆಸರುಗಳನ್ನು ಪಟ್ಟಿ ಮಾಡಿ. ನಿಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಭೇಟಿಯಾದ ಗೆಳತಿಯರನ್ನು ನೆನಪಿಸಿಕೊಳ್ಳಿ. ಅವರ ಫೋನ್ ನಂಬರ್, ಮೊಬೈಲ್ ನಂಬರ್ ಅಥವಾ ವಿಳಾಸ ಇ-ಮೇಲ್ ಐಡಿ ಇದೆಯೇ ಚೆಕ್ ಮಾಡಿ. ಈ ಗೆಳತಿಯರಲ್ಲಿ ನಿಮಗೆ ಈಗಲೂ ಆಪ್ತರೆನಿಸುವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿ. ಒಬ್ಬರ ಮೂಲಕ ಇನ್ನೊಬ್ಬರ ಸುಳಿವು ಸಿಗಬಹುದು ಇಂದಿನ ಕಾಲದಲ್ಲಿ ಇದೇನು ಕಷ್ಟವಾಗಲಾರದು ಆದರೆ ನಿಮ್ಮ ಪ್ರಯತ್ನ ಬಿಡಬೇಡಿ.
ನಿಮಗೆ ಇಷ್ಟವಾಗದಿದ್ದ, ನಿಮ್ಮನ್ನು ದ್ವೇಷಿಸುತ್ತಿದ್ದ, ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತಿದ್ದ ಗೆಳತಿಯರು ಕೂಡ ಅಚಾನಕ್ಕಾಗಿ ಬಂದ ಫೋನ್ ಕರೆಯಿಂದಲೋ, ಪತ್ರದಿಂದಲೋ ಸಂಭ್ರಮಿಸದಿದ್ದರೆ ಕೇಳಿ. ಅಂದಿನ ಕಹಿನೆನಪುಗಳು ಕರಗಿ ಸಿಹಿನೆನಪುಗಳಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ. ಒಂದು ನಗು, ತೊಟ್ಟು ಕಣ್ಣೀರು, ಮೆಲುವಾದ ಮಾತು, ನೆನಪಿನ ಬುಗ್ಗೆ, ಬರ್ತಿಯಾ ಮನೆಗೆ ಅನ್ನುವ ಆತ್ಮೀಯ ಆಹ್ವಾನ ಎಂಥ ಕಹಿನೆನಪುಗಳನ್ನೂ ನಿವಾಳಿಸಿ ಬಿಸಾಕಿರುತ್ತದೆ. ಆ ಮಾಂತ್ರಿಕ ಶಕ್ತಿ ಆ ಗೆಳೆತನದ ಬಾಂಧವ್ಯದಲ್ಲಿದೆ.
ನಿಮ್ಮ ಬಾಲ್ಯದ ಕಾಲೇಜಿನ ಆಪ್ತ ಗೆಳತಿಯರು ಖಂಡಿತಾ ನಿಮಗೆ ಸಿಗುತ್ತಾರೆ. ಆಗ ಮತ್ತೊಮ್ಮೆ ಪಾಠ ಮಾಡುವಾಗ ನಿಮ್ಮ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಸುಂದರಿಯನ್ನೇ ನೋಡುತ್ತಿದ, ಇಂಗ್ಲೀಷ್ ಲೆಕ್ಚರರ್ ಕ್ಲಾಸಿಗೆ ಬಂಕ್ ಹೊಡೆದು, ಹಿಂದಿ ಸಿನಿಮಾ ನೋಡಿದ್ದು ಗೆಳತಿಗೆ ಪ್ರೇಮ ಪತ್ರ ಕೊಟ್ಟಿದ್ದು, ಪ್ರೇಮಕುದಿರಿಸಿದ್ದು, ತನ್ನ ಪ್ರಿಯಕರನ ಜೋತೆಗೆ ಓಡಿಹೋಗಲು ನೆರವಾಗಿದ್ದು, ಕಾಲೇಜಿನಲ್ಲಿ ಕುಖ್ಯಾತಿ ಪಡೆದಿದ್ದ ಲೈಲಾ ಮಜ್ನು ಜೋಡಿ... ಓಹ್! ಆ ದಿನಗಳು ಎಷ್ಟು ಚೆಂದವಾಗಿದ್ದುವಲ್ಲ? ಈ ದಿನಗಳನ್ನು ಕೂಡ ಅಷ್ಟೇ ಚೆಂದ ಮಾಡಿಕೊಳ್ಳುವ ಅವಕಾಶ ನಿಮ್ಮ ಕೈಯಲ್ಲಿದೆ. ಈಗಲೇ ಕಾರ್ಯತತ್ಪರರಾಗಿರಿ. ಆಲ್ ದಿ ಬೆಸ್ಟ್.ಹಳೆ ಗೆಳತಿ ಸಿಕ್ಕರೆ ನನಗೆ ಒಂದು ಪತ್ರ ಬರೆಯಲು ಮರೆಯಬೇಡಿ

2 comments:

  1. Hi Roopa

    By reading that blog my eyes are became wet. I went back to childhood days and college days.now I need to contact every one from my childhood ansutte..and also not possible ansutte...that days wont come back.
    Keep writing gelati

    ReplyDelete
  2. love u kne ist chanda baritiya ankodirilla macha
    ur,
    sandaya

    ReplyDelete